
ಮಹಾಕುಂಭನಗರ: ಮಹಾಕುಂಭ ಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಕೈಗೊಳ್ಳುತ್ತಿದ್ದಾರೆ. ಈ ನಡುವೆ ಇಂದು (ಬುಧವಾರ) ಮೌನಿ ಅಮಾವಾಸ್ಯೆ ಇರುವ ಕಾರಣ ಎರಡನೇ ಅಮೃತ ಸ್ನಾನ ಕೈಗೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಕಾಲ್ತುಳಿತ ಸಂಭವಿಸಿದೆ.



ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಮೃತಪಟ್ಟವರ ಬಗ್ಗೆ ಇನ್ನಷ್ಟೇ ಖಚಿತವಾಗಬೇಕಿದೆ.
ಮಹಾಕುಂಭ ನಗರದ ತ್ರಿವೇಣಿ ಮಾರ್ಗ, ಕಾಳಿ ಮಾರ್ಗ ಸೇರಿದಂತೆ ಸಂಗಮದ ಸುತ್ತಮುತ್ತಲಿನ ರಸ್ತೆಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ಜನರ ನಿಯಂತ್ರಣಕ್ಕೆ ಅಧಿಕಾರಿಗಳು ಭದ್ರತೆ ಹೆಚ್ಚಿಸಿದ್ದಾರೆ. ಭಕ್ತರ ಓಡಾಟಕ್ಕೆ ಅನುಕೂಲವಾಗಲು ಈ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮೌನಿ ಅಮಾವಾಸ್ಯೆಯ ಕುಂಭಸ್ನಾನ ರದ್ದು ಮಾಡಿದ ಅಘಾಡಗಳು : ಜನಸಾಗರ ತುಂಬಿ ತುಳುಕುತ್ತಿರುವ ಕಾರಣ ಕಾಲ್ತುಳಿತ ಆಗುತ್ತಿದ್ದಂತೆ ಮೌನಿ ಅಮಾವಾಸ್ಯೆಯ ಕುಂಭಸ್ನಾನವನ್ನು 13 ಅಘಾಡಗಳು ರದ್ದು ಮಾಡಿವೆ.
ಕಾರಣವಾಯಿತೇ ವಿಐಪಿ ದರ್ಶನ: ಕುಂಭಸ್ನಾನದಲ್ಲಿ ಭಕ್ತರಿಗೆ 10 ಕಿಮೀ ವರೆಗೆ ನಡೆದೇ ಸಾಗಬೇಕಾದ ವ್ಯವಸ್ಥೆ ಇದ್ದು, ವಿಐಪಿಗಳಿಗೆ ನೇರ ಸಂಗಮದವರೆಗೆ ವಾಹನಗಳಲ್ಲೇ ಹೋಗುವ ವ್ಯವಸ್ಥೆ ಇದೆ ಎಂಬ ಆರೋಪ ಕೇಳಿ ಬಂದಿದೆ. ಹಲವು ಕೃತಕ ಸೇತುವೆಗಳನ್ನು ವಿಐಪಿ ವಾಹನ ಸಂಚರಿಸಲೆಂದೇ ನಿಗಧಿಪಡಿಸಲಾಗಿದ್ದು, ಇದರಿಂದಾಗಿ ಹಲವು ಕಡೆ ಜನಜಂಗುಳಿ ಏರ್ಪಟ್ಟಿದೆ. ಹಲವು ವಿಡಿಯೋಗಳಲ್ಲಿ ಯೋಗಿ ಸರ್ಕಾರದ ವಿಐಪಿ ವ್ಯವಸ್ಥೆಗೆ ಆಕ್ರೋಶ ಹೊರಬಿದ್ದಿದೆ.
#महाकुंभ2025 में श्रद्धालुओं 10-10 किमी पैदल चलने पर मजबूर है।
सुविधाएँ सिर्फ VIP तक सीमित हैं, जबकि आम जनता परेशान है।
सरकार को VIP ट्रीटमेंट बंद कर सभी को समान सुविधाएँ देनी चाहिए।
— Sanskar Jain (monu) (@Sanskarjain270) January 27, 2025
ಕುಂಭಸ್ನಾನವನ್ನು ಸೇನೆಯ ಸುಪರ್ಧಿಗೆ ಕೊಡಿ : ಮಹಾಮಂಡಲೇಶ್ವರರ ಮನವಿ: ಭಕ್ತ ಸಾಗರ ತುಂಬಿ ತುಳುಕುತ್ತಿರುವ ಕಾರಣ ಕುಂಭ ಸ್ನಾನದ ಸಂಪೂರ್ಣ ಉಸ್ತುವಾರಿ ಸೇನೆಗೆ ನೀಡುವಂತೆ ಆಖಾಡವೊಂದರ ಮಹಾಮಂಡಲೇಶ್ವರರು ಮನವಿ ಮಾಡಿದ್ದಾರೆ.
ಅಧಿಕಾರಿಗಳು ವಿಐಪಿ ಹಾಗೂ ವಿವಿಐಪಿ ಸೌಲಭ್ಯ ಒದಗಿಸುವುದರಲ್ಲೇ ಬಿಝಿಯಾಗಿದ್ದಾರೆ ಎಂಬ ಆಕ್ರೋಶ ಕೇಳಿ ಬಂದಿದೆ.
ಇದೇ ಮಾತನ್ನು ನಿನ್ನೆ ಕೂಡ ಮಾಜಿ ಸಿಎಂ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದರು.
ಕೋಟ್ಯಾಂತರ ಸಂಖ್ಯೆಯ ಭಕ್ತರು ತ್ರಿವೇಣಿ ಸಂಗಮದ ಕಡೆ ಮುನ್ನುಗ್ಗುತ್ತಿರುವುದರಿಂದ ಹಲವು ಜನ ಮಹಾಮಂಡಲೇಶ್ವರರು ಇಂದು ಮಾಧ್ಯಮಗಳಲ್ಲಿ ಮಾತನಾಡಿ, ಎಲ್ಲರೂ ಸಂಗಮದ ಕಡೆಯೇ ಹೋಗಬೇಡಿ, ಮೌನಿ ಅಮಾವಾಸ್ಯೆಯ ದಿನ ಯಾವೂದೇ ಘಾಟ್ ನಲ್ಲೂ ಸ್ನಾನ ಮಾಡಿದರೂ ಪವಿತ್ರ ಎಂದು ಮನವಿ ಮಾಡುತ್ತಿದ್ದಾರೆ.
ಇತರ ರಾಜ್ಯ, ದೇಶಗಳಿಂದ ಬರುವ ವಾಹನಗಳಿಗೆ ನಗರದ ಹೊರವಲಯದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಜನರನ್ನು ನಿಯಂತ್ರಿಸಲು ಸಂಗಮದ ಸುತ್ತಮುತ್ತಲಿನ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ ಎಂದು ವರದಿ ತಿಳಿಸಿದೆ.ಮೌನಿ ಅಮಾವಾಸ್ಯೆ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚುವ ಕಾರಣ ಐದು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಇಂಟಿಗ್ರೇಟೆಡ್ ಕಂಟ್ರೋಲ್ ಮತ್ತು ಕಮಾಂಡ್ ಸೆಂಟರ್ ಸಂಗಮದ ಬಳಿ ನಿಗಾ ಇರಿಸಲಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ 3 ಕೋಟಿ ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ. ಮಂಗಳವಾರ ರಾತ್ರಿಯಿಂದಲೇ ಮೌನಿ ಅಮಾವಾಸ್ಯೆಯ ಅಮೃತ ಸ್ನಾನ ಆರಂಭವಾಗಲಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.