November 8, 2025
WhatsApp Image 2025-06-23 at 12.37.49 PM

ಉಡುಪಿ: ಹಣಕ್ಕಾಗಿ ಮಗ ತನ್ನ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಮಗ ಮಾಡಿ ಕೃತ್ಯ ಬೆಳಕಿಗೆ ಬಂದಿದ್ದು,ಈ ಬಗ್ಗೆ ಆರೋಪಿ ಪುತ್ರನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಮೃತಪಟ್ಟವರನ್ನು ಪದ್ಮಾಬಾಯಿ (45) ಹಾಗೂ ಕೊಲೆಗೈದ ಆರೋಪಿ ಪುತ್ರ ಈಶ ನಾಯ್ಕ (26) ಎಂದು ಗುರುತಿಸಲಾಗಿದೆ.

ಜೂನ್ 18ರಂದು ರಾತ್ರಿ ಪದ್ಮಾಬಾಯಿ ಸೊಂಟ ನೋವಿನಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅಂದು ರಾತ್ರಿ ಪದ್ಮಾಬಾಯಿ ಅವರ ತಂಗಿ ಶಿಲ್ಪಾ ಅವರಿಗೆ ಕರೆ ಮಾಡಿದ ಈಶ ನಾಯ್ಕ ತಾಯಿಗೆ ಸೌಖ್ಯವಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ಕಳುಹಿಸುವಂತೆ ತಿಳಿಸಿದ್ದನು. ಅದರಂತೆ ಶಿಲ್ಪಾ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದರು. ಜೂನ್ 19ರಂದು ಬೆಳಗ್ಗೆ ಶಿಲ್ಪಾರಿಗೆ ಕರೆ ಮಾಡಿದ ಈಶ ನಾಯ್ಕ ತಾಯಿ ಬೆಳಗ್ಗೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದನು.

ಶಿಲ್ಪಾ ಆಸ್ಪತ್ರೆಗೆ ಬಂದು ನೋಡಿದಾಗ ಪದ್ಮಬಾಯಿ ಅವರ ಕುತ್ತಿಗೆ ಬಳಿ ಕೆಂಪಾಗಿದ್ದು, ಕುತ್ತಿಗೆಯನ್ನು ಒತ್ತಿದ ರೀತಿ ಕಂಡುಬಂದಿದೆ. ಅವರ ಮರಣದಲ್ಲಿ ಸಂಶಯ ಇರುವುದಾಗಿ ಶಿಲ್ಪಾ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಣಿಪಾಲ ಆಸ್ಪತ್ರೆಯಲ್ಲಿ ಶವ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅದರಲ್ಲಿ ಪದ್ಮಾಬಾಯಿ ಅವರನ್ನು ಯಾರೋ ದುಷ್ಕರ್ಮಿಗಳು ಜೂನ್ 18ರಂದು ರಾತ್ರಿಯಿಂದ ಜೂನ್19ರ ಬೆಳಗಿನ ನಡುವೆ ಕೊಲೆ ಮಾಡಿರುವುದಾಗಿ ದೃಢಪಟ್ಟಿದೆ. ಅದರಂತೆ ಮಣಿಪಾಲ ಪೊಲೀಸರು ಪ್ರಕರಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.

ತನಿಖೆಯಲ್ಲಿ ಪದ್ಮಾಬಾಯಿ ಅವರನ್ನು ಅವರ ಮಗ ಈಶ ನಾಯ್ಕ ಹಣಕ್ಕಾಗಿ ಹಾಗೂ ಕೌಟುಂಬಿಕ ಕಲಹದಿಂದ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಅದರಂತೆ ಪೊಲೀಸರು ಆರೋಪಿಯನ್ನು ಹಾಜರುಪಡಿಸಿದ್ದಾರೆ.

About The Author

Leave a Reply