ಗಾಜಾಪಟ್ಟಿ(ಇಸ್ರೇಲ್): ಸುರಕ್ಷಿತ ವಲಯ ಎಂದು ಘೋಷಿಸಿದ್ದ ಇಸ್ರೇಲ್ ಇದೀಗ ಮಂಗಳವಾರ ರಾತ್ರಿ ಸೆಂಟ್ರಲ್ ಗಾಜಾಪಟ್ಟಿ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ 60ಕ್ಕೂ ಅಧಿಕ ಪ್ಯಾಲೆಸ್ತೇನಿಯರು ಸಾವಿಗೀಡಾಗಿರುವ ಘಟನೆ ನಡೆದಿದೆ.
ಇತ್ತೀಚೆಗೆ ಗಾಜಾಪಟ್ಟಿಯ ಮೇಲೆ ನಡೆಯುತ್ತಿರುವ ವೈಮಾನಿಕ ದಾಳಿಯಲ್ಲಿ ಪ್ಯಾಲೇಸ್ತೇನಿಯರು ಸಾವಿಗೀಡಾಗುತ್ತಿದ್ದು, ಇಸ್ರೇಲ್ ಉತ್ತರ ಮತ್ತು ದಕ್ಷಿಣ ಪ್ರದೇಶದಲ್ಲಿ ಭೂ ದಾಳಿಯನ್ನು ಕೈಬಿಟ್ಟಿರುವುದಾಗಿ ವರದಿ ವಿವರಿಸಿದೆ.
ಮೆಡಿಟೆರೇನಿಯನ್ ಕರಾವಳಿ ಪ್ರದೇಶದ ಸೇರಿದಂತೆ 23 ಚದರ ಮೈಲಿಗಳನ್ನು ಒಳಗೊಂಡಿರುವ ಸುರಕ್ಷಿತ ವಲಯದ ಮೇಲೆ ಇಸ್ರೇಲ್ ಪ್ರತಿದಿನ ವೈಮಾನಿಕ ದಾಳಿ ನಡೆಸುತ್ತಿದೆ. ಸುರಕ್ಷಿತ ವಲಯದಿಂದ ಪರಾರಿಯಾಗುವ ಪ್ಯಾಲೆಸ್ತೇನಿಯನ್ ರನ್ನು ವಶಕ್ಕೆ ಪಡೆದು ನಿರಾಶ್ರಿತ ಶಿಬಿರದಲ್ಲಿ ಕೂಡಿ ಹಾಕಿಡಲಾಗುತ್ತಿರುವುದಾಗಿ ವರದಿ ವಿವರಿಸಿದೆ.
ದಕ್ಷಿಣ ನಗರವಾದ ಖಾನ್ ಯೂನಿಸ್ ನ ಮುವಾಸಿಯ ಕೇಂದ್ರ ಪ್ರದೇಶದ ಮಾರ್ಕೆಟ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಪರಿಣಾಮ ಭಾರೀ ಸಾವು-ನೋವು ಸಂಭವಿಸಿರುವುದಾಗಿ ವರದಿ ತಿಳಿಸಿದೆ.