ಮಣಿಪಾಲ: ಕೇರಳದಲ್ಲಿ ನಡೆದ ದುರಂತ ಅತ್ಯಂತ ನೋವು ತಂದಿದೆ. ಪ್ರಕೃತಿ ವಿಕೋಪಗಳನ್ನು ನಾವು ಜನರು ತಡೆಯಲು ಸಾಧ್ಯವಿಲ್ಲ. ಆದರೆ ಮುಂಜಾಗರೂಕತೆಯಿಂದ ಅದನ್ನು ತಡೆಯಲು ಸಾಧ್ಯವಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಮಣಿಪಾಲದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಖಾದರ್ ಅವರು, ಪ್ರಕೃತಿಯ ವಿರುದ್ಧವಾಗಿ ನಾವು ಹೋಗುವುದನ್ನು ನಿಲ್ಲಿಸಬೇಕು. ಜನರು, ಸಂಬಂಧಪಟ್ಟ ಇಲಾಖೆ ಮತ್ತು ಸರಕಾರ ಎಲ್ಲರೂ ಕೂಡ ಎಚ್ಚೆತ್ತುಕೊಳ್ಳಬೇಕಾಗಿದೆ. ಸರಕಾರದ ನಿಯಮಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಕೇರಳದ ದುರಂತದಿಂದ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ. ಈ ಪ್ರಕೃತಿಯನ್ನು ನಮ್ಮ ನಂತರದ ಕೋಟ್ಯಂತರ ಮಕ್ಕಳಿಗೆ ಬಿಟ್ಟು ಹೋಗಬೇಕಾಗಿದೆ. ಪ್ರಕೃತಿಯ ವಿರುದ್ಧ ಹೋಗುವ ಯಾವುದೇ ಅಧಿಕಾರ ನಮಗೆ ಇಲ್ಲ ಎಂದು ಹೇಳಿದ್ದಾರೆ.