October 13, 2025
WhatsApp Image 2023-09-20 at 9.27.30 AM

ಹೊಸದಿಲ್ಲಿ: ಮೂರು ವರ್ಷದ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ, ಹಳೆ ಸಂಸತ್ ಭವನದ ಸೆಂಟ್ರಲ್‍ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಮಾತೃಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಪಕ್ಕದಲ್ಲಿ ಕುಳಿತದ್ದು ಮತ್ತು ಅವರ ಜತೆ ಮಾತುಕತೆ ನಡೆಸಿದ್ದು ಎಲ್ಲರ ಗಮನ ಸೆಳೆಯಿತು.

ಸೋನಿಯಾ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯಲ್ಲಿ ಪಕ್ಷದ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರ ಜತೆ ಮುಂದಿನ ಸಾಲಿನಲ್ಲಿ ಆಸೀನರಾಗಿದ್ದಾಗ ಸಿಂಧಿಯಾ ನಿಂತು, ಹಳೆಯ ಸಹೋದ್ಯೋಗಿಗಳನ್ನು ಮಾತನಾಡಿಸಿದರು. ಬಳಿಕ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರ ಪಕ್ಕ ಆಸೀನರಾದರು.

ಖರ್ಗೆ ಹಾಗೂ ಚೌಧರಿಯವರು ಉಪರಾಷ್ಟ್ರಪತಿ ಜೈದೀಪ್ ಧನ್ಕರ್, ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಸ್ಪೀಕರ್ ಓಂಬಿರ್ಲಾ, ರಾಜ್ಯಸಭೆ ನಾಯಕ ಪಿಯೂಷ್ ಗೋಯಲ್, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಜತೆ ತಮ್ಮ ಆಸನಗಳನ್ನು ತೆರವುಗೊಳಿಸಿದ ಬಳಿಕ ಸಿಂಧಿಯಾ, ಸೋನಿಯಾ ಬಳಿಗೆ ಆಗಮಿಸಿದರು.

2020ರಲ್ಲಿ ಸಿಂಧ್ಯಾ 22 ಶಾಸಕರ ಜತೆಗೂಡಿ ಪಕ್ಷವನ್ನು ತೊರೆದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮುಖಂಡ ಕಮಲ್‍ನಾಥ್ ನೇತೃತ್ವದ ಸರ್ಕಾರ ಪತನಗೊಂಡಿತ್ತು. ಸಂಸತ್ತಿನ ಭವ್ಯ ಪರಂಪರೆಯನ್ನು ಸಂಭ್ರಮಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರು ಸೆಂಟ್ರಲ್ ಹಾಲ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

About The Author

Leave a Reply