
ಉಡುಪಿ : ಅನ್ಯಧರ್ಮಕ್ಕೆ ಸೇರಿದ್ದ ಯುವಕ ಯುವತಿಯನ್ನು ರಸ್ತೆ ಮಧ್ಯೆ ತಡೆದು ನಿಲ್ಲಿಸಿ ವಿಚಾರಣೆ ನಡೆಸಿ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪದ ಮೇಲೆ 10 ಮಂದಿಯ ವಿರುದ್ದ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಕಳೆದ ತಿಂಗಳು ನಡೆದಿರುವ ಘಟನೆ ಇದಾಗಿದ್ದು, ಹಿಂದೂ ಧರ್ಮಕ್ಕೆ ಸೇರಿದ ಯುವತಿಯೊಬ್ಬಳು ಪರಿಚಯದ ಮುಸ್ಲೀಂ ಯುವಕನ ಜೊತೆ ಆಗುಂಬೆ ಸಮೀಪದ ಸಿರಿಮನೆ ಫಾಲ್ಸ್ ಗೆ ಹೋಗಿದ್ದಾರೆ. ಈ ವೇಳೆ ವಾಪಸ್ ಬರುವಾಗ ಅನ್ಯಮತೀಯ ಜೋಡಿಯನ್ನು ಕೆಲವು ಹಿಂದೂ ಸಂಘಟನೆಯ ಕಾರ್ಯಕರ್ತರು ಎನ್ನಲಾದ ಯುವಕರ ಗುಂಪು ತಡೆದು ವಿಚಾರಣೆ ಮಾಡಿದ್ದರು.
ವಿಚಾರಣೆಯ ವೇಳೆ ವಿಡಿಯೋ ಮಾಡದಂತೆ ಯುವತಿ ಮನವಿ ಮಾಡಿದ್ದಳು. ಆದರೂ ಸಹ ಹಿಂದೂ ಕಾರ್ಯಕರ್ತರು ವಿಡಿಯೋ ಮಾಡಿ ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ನಂತರ ಆಗುಂಬೆ ಪೊಲೀಸರು ಯುವತಿ ಹಾಗೂ ಯುವಕನ ಮನೆಯವರನ್ನು ಠಾಣೆಗೆ ಕರೆಸಿದ್ದರು. ಆದ್ರೆ, ಇಬ್ಬರ ಮನೆಯವರು ಪರಿಚಯಸ್ಥರಾಗಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ವಾಪಸ್ ಕಳುಹಿಸಿದ್ದರು. ಘಟನೆಯ ವೇಳೆ ಮಾಡಿದ್ದ ವಿಡಿಯೋವನ್ನು ಕಿಡಿಗೇಡಿಗಳು ತಿಂಗಳ ಬಳಿಕ ಸಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಹಿಂದೂ ಧರ್ಮ 006 ಎನ್ನುವ ಫೇಸ್ ಬುಕ್ ಪೇಜ್ನಿಂದ ವೀಡಿಯೋ ಅಪ್ಲೋಡ್ ಮಾಡಲಾಗಿದ್ದು, ಇದೀಗ ಇನ್ಸ್ಸ್ಟಾಗ್ರಾಂ, ವಾಟ್ಸಾಪ್ ನಲ್ಲಿ ಯುವಕ, ಯುವತಿಯ ಫೋಟೋ ವೀಡಿಯೋ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಬೆನ್ನಲ್ಲೇ ಯುವತಿಯ ಸಹೋದರ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.