

ಕಡಬ :ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಮಸೀದಿ ಆವರಣದೊಳಗೆ ನುಗ್ಗಿ ಜೈಶ್ರೀರಾಂ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಮಸೀದಿ ಆಡಳಿತ ಮಂಡಳಿ ಕಡಬ ಠಾಣೆಯಲ್ಲಿ ದೂರು ದಾಖಲಿಸಿದೆ.ರವಿವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕಡಬ ಠಾಣಾ ವ್ಯಾಪ್ತಿಯ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಕಾಂಪೌಂಡ್ ಒಳಗೆ ಬೈಕಿನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಮಸೀದಿಯ ವರಾಂಡದಲ್ಲಿ ಬೈಕ್ ತಿರುಗಿಸಿ ತೆರಳಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೈಶ್ರೀರಾಂ ಘೋಷಣೆ ಕೂಗಿದ ಯುವಕರು, ಮಸೀದಿಯಲ್ಲಿದ್ದ ಧರ್ಮಗುರುಗಳನ್ನು ಕಂಡು ತಕ್ಷಣವೇ ಹಿಂತಿರುಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಡಬ ಸಬ್ ಇನ್ಸ್‌ಪೆಕ್ಟರ್ ಅಭಿನಂದನ್ ಹಾಗೂ ಉಪ್ಪಿನಂಗಡಿ ಠಾಣಾ ಸಬ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿಗಳು ಪರಿಸರದ ವಿವಿಧ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದು, ಎರಡು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ






