ಕಡಬ : ರಾತ್ರಿ ವೇಳೆಗೆ ಬೈಕ್ ನಲ್ಲಿ ಬಂದು ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಜೈಶ್ರೀರಾಮ್ ಘೋಷಣೆ ಕೂಗಿದ ಇಬ್ಬರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ಬಿಳಿನೆಲೆ ಸೂಡ್ಲು ನಿವಾಸಿ ಕೀರ್ತನ್(25) ಮತ್ತು ಕೈಕಂಬ ನಡ್ತೋಟ ನಿವಾಸಿ ಸಚಿನ್ (26)ಬಂಧಿತ ಆರೋಪಿಗಳು. ಭಾನುವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಕಾಂಪೌಂಡ್ ಒಳಗೆ ಬೈಕಿನಲ್ಲಿ ಆಗಮಿಸಿ ಮಸೀದಿಯ ವರಾಂಡದಲ್ಲಿ ಜೈಶ್ರೀರಾಂ ಘೋಷಣೆ ಕೂಗಿದ್ದಾರೆ ಎನ್ನಲಾಗಿದ್ದು, ಮಸೀದಿಯಲ್ಲಿದ್ದ ಧರ್ಮಗುರುಗಳನ್ನು ಕಂಡು ಪರಾರಿಯಾಗಿದ್ದರು. ಬೈಕಿನಲ್ಲಿ ಕಾಂಪೌಂಡ್ ಒಳಗಡೆ ಬಂದು ತೆರಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಅಭಿನಂದನ್, ಉಪ್ಪಿನಂಗಡಿ ಠಾಣಾ ಸಬ್ ಇನ್ಸ್‌ಪೆಕ್ಟರ್ ರಾಜೇಶ್ ಹಾಗೂ ಸಿಬ್ಬಂದಿಗಳು ಪರಿಸರದ ವಿವಿಧ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದರು.
ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಎರಡು ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ವಿವಿಧ ಕಡೆ ಶೋಧ ಮಾಡಿದ್ದರು .ಓರ್ವ ಸಾಯಂಕಾಲದ ವೇಳೆ ಸಿಕ್ಕಿದ್ದು ಮತ್ತೋರ್ವ ಗೌಪ್ಯ ಸ್ಥಳವೊಂದರಲ್ಲಿ ರಾತ್ರಿವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಘಟನೆ ನಡೆದು 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಪತ್ತೆಹಚ್ಚಿದ ಕಡಬ ಪೊಲೀಸರ ಕಾರ್ಯಾಚರಣೆಗೆ ದ.ಕ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘನೆ ವ್ಯಕ್ತಪಡಿಸಿರುವುದಾಗಿ ತಿಳಿದು ಬಂದಿದೆ.