
ಮಂಗಳೂರು: ರೋಗಿಯೊಂದಿಗೆ ಆಸ್ಪತ್ರೆಗೆ ಬಂದಿದ್ದ ಯುವಕನೊಬ್ಬ ರಿಸೆಪ್ಯನಿಸ್ಟ್ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಆಸ್ಪತ್ರೆ ಸೊತ್ತುಗಳನ್ನು ಹಾನಿಗೈದಿರುವ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.



ಕದ್ರಿ ವ್ಯಾಸನಗರ ನಿವಾಸಿ ಆಶಿಕ್ (32) ಬಂಧಿತ ಆರೋಪಿ. ಸೆ.25ರಂದು ಸಂಜೆ ಆಶಿಕ್ ತನ್ನ ತಾಯಿಯನ್ನು ತಪಾಸಣೆಗೆಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಆಸ್ಪತ್ರೆಯ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ಮಹಿಳಾ ಸಿಬ್ಬಂದಿ ರೋಗಿಯ ವೈಯಕ್ತಿಕ ವಿವರ, ಪ್ರಾಯ, ವಿಳಾಸ ಇತ್ಯಾದಿ ಮಾಹಿತಿಗಳನ್ನು ಕೇಳಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಆಶೀಕ್ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೆ, ಸ್ಥಳದಲ್ಲಿ ದಾಂಧಲೆ ನಡೆಸಿ ಮಹಿಳೆಯನ್ನು ದೂಡಿ ಮೈಕೈಯನ್ನು ಮುಟ್ಟಿ ಮಾನಭಂಗಕ್ಕೆ ಯತ್ನಿಸಿದ್ದಾನೆ. ಜೊತೆಗೆ ಅಡಿಶನ್ ಡೆಸ್ಕ್ ನಲ್ಲಿದ್ದ ಆಸ್ಪತ್ರೆಯ ಟೇಬಲ್, ಕಂಪ್ಯೂಟರ್ ಇನ್ನಿತರ ಸೊತ್ತುಗಳನ್ನು ಹಾನಿ ಮಾಡಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಕಂಕನಾಡಿ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿ ಕೆಲಸವಿಲ್ಲದೇ ಮನೆಯಲ್ಲೇ ಇದ್ದು, ಮಾನಸಿಕ ತೊಂದರೆ ಎದುರಿಸುತ್ತಿದ್ದಾನೆ. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆಂದು ಪೊಲೀಸರು ಹೇಳಿದ್ದಾರೆ.