
ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ಗುಂಪೊಂದು ಸಿಟಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಂಗಳೂರಿನ ಕಣ್ಣೂರು ಎಂಬಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ಕಂಡಕ್ಟರ್ ಅನ್ನು ಯಶ್ ರಾಜ್ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಗಳಿಂದ ಕಂಕನಾಡಿ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



ಮಂಗಳವಾರ ಸಂಜೆ ಮಂಗಳೂರು-ಅಡ್ಯಾರ್ ಮಧ್ಯೆ ಸಂಚರಿಸುವ SR ಟ್ರಾವೆಲ್ಸ್ ಬಸ್ ಕಂಡಕ್ಟರ್ ಯಶ್ ರಾಜ್ ಬಸ್ ನ ನಿಗದಿತ ಸ್ಥಳ ತಲುಪಬೇಕಾದ ಸಮಯ ಮೀರಿದ ಕಾರಣ ಬಸ್ ನಲ್ಲಿದ್ದ ಪ್ರಯಾಣಿಕರು ನಿಗದಿತ ನಿಲ್ದಾಣದಿಂದ ಹಿಂದಿನ ನಿಲ್ದಾಣದಲ್ಲಿ ಬಸ್ ನಿಂದ ಇಳಿಯುವಂತೆ ಮನವಿ ಮಾಡಿದ್ದಾನೆ. ಕಂಡಕ್ಟರ್ ಮನವಿಯಂತೆ ಪ್ರಯಾಣಿಕರು ಬಸ್ ಇಳಿದಿದ್ದರೂ ಬಸ್ ನಲ್ಲಿದ್ದ ವ್ಯಕ್ತಿಯೋರ್ವ ಈ ವಿಚಾರವಾಗಿ ಕಂಡಕ್ಟರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ವಾಗ್ವಾದ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಬಳಿಕ ಪ್ರಯಾಣಿಕ ಕಣ್ಣೂರು ಎಂಬಲ್ಲಿ ಬಸ್ ಇಳಿದಿದ್ದಾನೆ. ಎಂದಿನಂತೆ ಬಸ್ ಅನ್ನು ಸ್ಟೇಟ್ ಬ್ಯಾಂಕ್ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಣ್ಣೂರು ಬಳಿ ಗುಂಪೊಂದು ಬಸ್ ಅಡ್ಡಗಟ್ಟಿ ಬಸ್ ಕಂಡಕ್ಟರ್ ಯಶ್ ರಾಜ್ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಯಶ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದು, ಘಟನೆ ಖಂಡಿಸಿ ಅಡ್ಯಾರು, ಫೈಸಲ್ ನಗರ ಸಂಚರಿಸುವ ಎಲ್ಲಾ ಸಿಟಿ ಬಸ್ ಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿದೆ.