Visitors have accessed this post 451 times.
ಚೆನ್ನೈ: ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ, ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಮಹಿಳಾ ರಿಪೋರ್ಟರ್ ಜತೆ ಕಿರಿಕ್ ಮಾಡಿಕೊಂಡಿದ್ದಾರೆ. ಅಣ್ಣಾಮಲೈ ಅವರ ವರ್ತನೆಗೆ ಪತ್ರಕರ್ತರು ಗುಂಪು ಆಕ್ರೋಶ ವ್ಯಕ್ತಪಡಿಸಿದೆ.
ʼನನ್ನ ನೆಲ ನನ್ನ ಜನʼ ಪಾದಯಾತ್ರೆಯನ್ನು ನಡೆಸುತ್ತಿರುವ ಬಿಜೆಪಿ ನಾಯಕ ಅಣ್ಣಾಮಲೈ ಅವರಿಗೆ ಮಹಿಳಾ ವರದಿಗಾರ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಬದಲಿಗೆ, ಪ್ರಶ್ನೆ ಕೇಳಿದೆ ವರದಿಗಾರ್ತಿಯನ್ನು ತಮ್ಮ ಪಕ್ಕಕ್ಕೆ ಬರುವಂತೆ ಒತ್ತಾಯಿಸಿದರು. ಅಲ್ಲದೇ, ಇಂಥ ಪ್ರಶ್ನೆ ಕೇಳಿದ ವರದಿಗಾರ್ತಿಯನ್ನು ಎಲ್ಲರೂ ನೋಡಲಿ ಎಂದು ಹೇಳಿದರು. ಅಣ್ಣಾಮಲೈ ಅವರ ವರ್ತನೆಗೆ ಸ್ಥಳದಲ್ಲಿ ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದಾದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ, ವರದಿಗಾರ್ತಿಗೆ ತಮ್ಮ ಪಕ್ಕಕ್ಕೆ ಬಂದು, ಕ್ಯಾಮೆರಾ ಮುಖ ತೋರಿಸುವಂತೆ ಒತ್ತಾಯಿಸುತ್ತಿದ್ದರು. ಒಂದು ವೇಳೆ ನೀವು ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರಾಗಿಲ್ಲದಿದ್ದರೆ ಬಿಜೆಪಿಯಲ್ಲೇ ಮುಂದುವರಿಯುತ್ತೀರಾ ಎಂದು ಮಹಿಳಾ ರಿಪೋರ್ಟರ್ ಅಣ್ಣಾಮಲೈ ಅವರಿಗೆ ಕೇಳಿದರು. ಈ ಪ್ರಶ್ನೆಗೆ ರೇಗಿದ ಅಣ್ಣಾಮಲೈ ಅವರು ತಮ್ಮ ಪಕ್ಕಕ್ಕೆ ಬರುವಂತೆ ವರದಿಗಾರ್ತಿಗೆ ಒತ್ತಾಯಿಸಿದರು. ಇನ್ನು ಅಣ್ಣಾಮಲೈ ಅವರ ನಡವಳಿಕೆಯನ್ನು ಕೊಯಮತ್ತೂರು ಪ್ರೆಸ್ ಕ್ಲಬ್ ಖಂಡಿಸಿದೆ. ಪತ್ರಿಕೋದ್ಯಮದ ಮೌಲ್ಯಗಳ ಬಗ್ಗೆ ಉಪದೇಶ ನೀಡುವ ಮೊದಲು ಅಣ್ಣಾಮಲೈ ಅವರು ನಾಯಕರಾಗಿ ಯಾವ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು, ಮತ್ತೊಬ್ಬರನ್ನು ಹೇಗೆ ಗೌರವದಿಂದ ನಡೆಸಿಕೊಳ್ಳಬೇಕು ಎಂಬುದನ್ನು ಕಲಿತುಕೊಳ್ಳಲಿ. ಸಾರ್ವಜನಿಕ ಜೀವನದಲ್ಲಿರುವವರು ಮತ್ತು ನಾಗರಿಕರ ನಡುವೆ ಸೇತುವೆ ರೀತಿಯಲ್ಲಿ ಪತ್ರಿಕೋದ್ಯಮ ಕೆಲಸ ಮಾಡುತ್ತದೆ ಎಂದು ಕೊಯಮತ್ತೂರು ಪ್ರೆಸ್ ಕ್ಲಬ್ ಅಧ್ಯಕ್ಷ ಎ ಆರ್ ಬಾಬು ಅವರು ಹೇಳಿದ್ದಾರೆ.