
ಕಾಪು: ತಾಲೂಕಿನ ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಬೆಳಪು ವಸತಿ ಬಡಾವಣೆಯ ಕಸ್ತೂರಿ ಅವರ ಪುತ್ರ ಇನ್ನಂಜೆ ಎಸ್ ಎಸ್ ಆಂಗ್ಲಮಾಧ್ಯಮ ಶಾಲೆ ಏಳನೇ ತರಗತಿ ವಿದ್ಯಾರ್ಥಿ ವಿಶ್ವಾಸ್ ನಾಯಕ್ (11) ಮೃತ ಬಾಲಕ. ಗುರುವಾರ ಸಂಜೆ ಶಾಲೆಯಿಂದ ಬಂದ ವಿಶ್ವಾಸ್ ನೆರೆಮನೆಯ ಶಶಾಂಕ್ ಮತ್ತು ನೌಷಾದ್ ಜತೆಗೆ ಮನೆ ಹಿಂಬದಿಯಲ್ಲಿರುವ ಕೆರೆಗೆ ಈಜಲೆಂದು ತೆರಳಿದ್ದನು. ಈಜುತ್ತಿದ್ದ ವಿಶ್ವಾಸ್ ಮುಳುಗಿ ಅಸ್ವಸ್ಥಗೊಂಡಿದ್ದು ಅದನ್ನು ಗಮನಿಸಿದ ಸ್ನೇಹಿತರಿಬ್ಬರು ಮೇಲಕ್ಕೆ ಬಂದು ಮಹಿಳೆಯೊಬ್ಬರಿಗೆ ವಿಷಯ ತಿಳಿಸಿದರು. ಮಕ್ಕಳು ಮತ್ತು ಮಹಿಳೆಯರ ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದು ಬಾಲಕನನ್ನು ಮೇಲಕ್ಕೆತ್ತಿದ್ದರು. ತತ್ ಕ್ಷಣ ಬಾಲಕನನ್ನು ಉಡುಪಿಯ ಆಸ್ಪತ್ರೆಗೆ ಕೊಂಡೊಯ್ಯಲು ಯತ್ನಿಸಲಾಯಿತಾದರೂ ದಾರಿಯಲ್ಲಿ ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


