
ಚೆನ್ನೈ : ಬೈಕ್ ವೀಲಿಂಗ್ ಮಾಡಿ ಪ್ರಕರಣದಲ್ಲಿ ಬಂಧಿತನಾಗಿರುವ ವ್ಯಕ್ತಿಯೊಬ್ಬನ ಜಾಮೀನು ಅರ್ಜಿ ವಿಚಾರಣೆ ವೇಳೆ ಗರಂ ಆದ ಮದ್ರಾಸ್ ಹೈಕೋರ್ಟ್ ರಸ್ತೆಗಳಲ್ಲಿ ಬೈಕ್‌ನಲ್ಲಿ ವೀಲಿಂಗ್ ಮಾಡುವವರ ಬೈಕ್‌ಗಳನ್ನು ಸುಟ್ಟು ಹಾಕಬೇಕು ಎಂದು ಅಭಿಪ್ರಾಯಪಟ್ಟಿದೆ.



ಬೈಕಿಂಗ್ ವಿಡಿಯೋಗಳಿಗೆ ಹೆಸರುವಾಸಿಯಾಗಿರುವ ಯುಟ್ಯೂಬರ್ ಟಿಟಿಎಫ್ ವಾಸನ್ ಚೆನ್ನೈ-ವೆಲ್ಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡುತ್ತಾ ಚಿತ್ರೀಕರಣ ಮಾಡುವಾಗ ಬಿದ್ದು ಗಾಯಗೊಂಡಿದ್ದರು. ಅಪಾಯಕಾರಿ ಚಾಲನೆಯಡಿ ಪ್ರಕರಣ ದಾಖಲಿಸಿದ ಪೊಲೀಸರು ವಾಸನ್ ಅವರನ್ನು ಬಂಧಿಸಿದ್ದರು. ಬಳಿಕ ವಾಸನ್ ಜಾಮೀನು ಅರ್ಜಿ ಸಲ್ಲಿಸಿದ್ದರು.
ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶ ಸಿವಿ ಕಾರ್ತಿಕೇಯನ್ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿ ವಾಸನ್‌ಗೆ ಇದೊಂದು ಪಾಠವಾಗಬೇಕು. ಕಸ್ಟಡಿಯಲ್ಲಿ ಇರಲಿ ಎಂದು ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲದೇ ವಾಸನ್ ಸ್ಟಂಟ್ ಮಾಡಿದ ಬೈಕನ್ನು ಸುಟ್ಟು ಹಾಕಬೇಕು. ಯೂಟ್ಯೂಬ್ ಚಾನೆಲನ್ನು ಡಿಲೀಟ್ ಮಾಡಬೇಕು ಎಂದು ಖಾರವಾಗಿ ಹೇಳಿದರು. ಈ ಸಂದರ್ಭದಲ್ಲಿ ವಾಸನ್ ಅವರ ಕೋರಿಕೆಯಂತೆ ವೈದ್ಯಕೀಯ ಸಹಾಯವನ್ನು ಒದಗಿಸುವಂತೆ ನ್ಯಾಯಾಲಯವು ಆದೇಶಿಸಿತು. ಕೋರ್ಟ್ ಈ ಹಿಂದೆ ಎರಡು ಬಾರಿ ವಾಸನ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.