ಬಂಟ್ವಾಳ: ಕರಿಯಂಗಳ ಗ್ರಾಮದ ಪುಂಚಮೆಯಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆದ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳ ಸಹಿತ ನಗದು, ವಾಹನ ಹಾಗೂ ಆಟಕ್ಕೆ ಬಳಸಲಾದ ಸೊತ್ತುಗಳನ್ನು ಅ. 6ರಂದು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ವೇಳೆ ಜುಗಾರಿ ಆಟದಲ್ಲಿ ತೊಡಗಿದ್ದ ಆಕಾಶ್ ಶೆಟ್ಟಿ, ಗಣೇಶ್ ಹಾಗೂ ಅರುಣ್‌ಪ್ರಸಾದ್‌ನನ್ನು ಬಂಧಿಸಲಾಗಿದ್ದು, ರಾಜ ಯಾನೆ ರಾಜೇಂದ್ರ ಹಾಗೂ ಇತರ ಕೆಲವರು ಪರಾರಿಯಾಗಿದ್ದಾರೆ.
ಆರೋಪಿ ಪುಂಚಮೆಯ ರಾಜ ಯಾನೆ ರಾಜೇಂದ್ರ ಎಂಬಾತನ ಮನೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಹಣ ವನ್ನು ಪಣಕ್ಕಿಟ್ಟು ಇಸ್ಪೀಟು ಜುಗಾರಿ ಆಡುತ್ತಿರುವ ಕುರಿತು ಪೊಲೀಸರಿಗೆ ಬಂದ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್‌ಐ ಹರೀಶ್ ಎಂ.ಆರ್. ಹಾಗೂ ಸಿಬಂದಿ ದಾಳಿ ನಡೆಸಿದ್ದಾರೆ.
ಸ್ಥಳದಿಂದ ಇಸ್ಪೀಟು ಎಲೆಗಳು, ಪ್ಲಾಸ್ಟಿಕ್ ಟಾರ್ಪಾಲ್, 7,600 ರೂ., ಸುಮಾರು 4.60 ಲಕ್ಷ ರೂ. ಮೌಲ್ಯದ ಕಾರು, 3 ದ್ವಿಚಕ್ರವಾಹನಗಳು ಸಹಿತ ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.