
ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರಿ ಇಬ್ಬರೂ ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ ಇದ್ದಂತೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.



ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಬಿಜೆಪಿಯವರು ಡಿಕೆ ಸಾಹೇಬರನ್ನ ಟಾರ್ಗೆಟ್ ಮಾಡುತ್ತಿದ್ದಾರೆ.
ಇಡಿ, ಸಿಬಿಐಯನ್ನು ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಡಿಕೆ ಸಾಹೇಬ್ರನ್ನು ನೋಡಿದ್ರೆ ಬಿಜೆಪಿಯವರಿಗೆ ಹೆದರಿಕೆ ಇದೆ. ಹೀಗಾಗಿ ಪದೇಪದೆ ಅವರ ಮೆಲೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.
ಒಕ್ಕಲಿಗ ಸಮುದಾಯದಲ್ಲಿ ಡಿಕೆ ಶಿವಕುಮಾರ್ ಅವರು ಪ್ರಬಲವಾಗಿದ್ದಾರೆ ಅಂತ ಎಚ್ ಡಿ ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ಬಿಜೆಪಿಯವರ ಷಡ್ಯಂತ್ರದಿಂದ ಈ ರೀತಿ ನಡೆಯುತ್ತಿದೆ. ನಮ್ಮ ಡಿಕೆ ಸಾಹೇಬರಿಗೆ ಏನಾದರೂ ಆದರೆ ನಾವು ಉಗ್ರ ಹೋರಾಟಕ್ಕೆ ಇಳಿಯುತ್ತೇವೆ. ನಮ್ಮ ಪಕ್ಷ ಹಾಗೂ ನಾಯಕರ ಬಗ್ಗೆ ನಾವು ಪ್ರಾಣ ಕೊಡಲು ಸಿದ್ದರಿದ್ದೇವೆ ಎಂದು ಎಚ್ಚರಿಸಿದರು.
ಡಿಕೆ ಸಾಹೇಬರು ಒಕ್ಕಲಿಗ ಸಮುದಾಯದ ಅತಿದೊಡ್ಡ ಲೀಡರ್ ಆಗಿದ್ದಾರೆ. ಇಂತಹ ದೊಡ್ಡ ಲೀಡರ್ ಡಿಕೆ ಸಾಹೇಬ್ರನ್ನು ಜೈಲಿಗೆ ಹಾಕುವಂತೆ ಕುಮಾರಸ್ವಾಮಿ ಕೇಂದ್ರ ಸರ್ಕಾರ ಜೊತೆ ಒಪ್ಪಂದ ಮಾಡಿಕೊಂಡು ಬಂದಿದ್ದಾರೆ. ನಿಮ್ಮದೇ ಸಮುದಾಯದ ನಾಯಕನನ್ನ ಜೈಲಿಗೆ ಹಾಕುವಂತೆ ಪ್ರಯತ್ನ ಮಾಡೋದು ಎಷ್ಟು ಸರಿ? ಒಕ್ಕಲಿಗ ಸಮುದಾಯ ಜೆಡಿಎಸ್ ಪಕ್ಷಕ್ಕೆ ಹಲವು ವರ್ಷಗಳಿಂದ ಬೆನ್ನೆಲುಬಾಗಿ ನಿಂತಿದೆ. ಇದಕ್ಕೆಲ್ಲ ನೀವು ದ್ರೋಹ ಬಗೆದಂತಲ್ಲವೇ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.