ಉಡುಪಿ: ಟ್ರಕ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಯುವಕ ಮೃತಪಟ್ಟ ಘಟನೆ ಮಾಬುಕಳದಲ್ಲಿ ಸಂಭವಿಸಿದೆ. ಬೆಂಗಳೂರಿನ ಬಿ.ಟಿ.ಎಂ. ಲೇಔಟ್ ನಿವಾಸಿ ಪುನೀತ್ (27) ಮೃತ ಯುವಕ. ಸಹ ಸವಾರ ಮಧು ಗಂಭೀರವಾಗಿ ಗಾಯಗೊಂಡಿದ್ದು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರು ದಸರಾ ರಜೆ ಪ್ರಯುಕ್ತ ಕರಾವಳಿ ಜಿಲ್ಲೆಗಳ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಹೊರಟಿದ್ದು, ಮಲ್ಪೆಗೆ ಭೇಟಿ ನೀಡಿ ಅಲ್ಲಿಂದ ಮುರ್ಡೇಶ್ವರಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಮಾಬುಕಳ ಸಮೀಪ ಗುಜರಾತ್ ಮೂಲದ ಟ್ರಕ್ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಇಬ್ಬರು ಗಂಭೀರ ಗಾಯಗೊಂಡಿದ್ದರು. ತತ್‌ಕ್ಷಣ ಅವರನ್ನು ಸಾಸ್ತಾನ ಟೋಲ್‌ನ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಪುನೀತ್ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರು. ಘಟನಾ ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.