ನವಿಲು ಗರಿ ಇಟ್ಟುಕೊಂಡಿರುವ ದರ್ಗಾ, ಮಸೀದಿ ಮೇಲೂ ದಾಳಿ ಮಾಡಿ ಮೌಲ್ವಿಗಳ ಬಂಧಿಸಿ- ಬಿಜೆಪಿ

ಬೆಂಗಳೂರು: ನವಿಲು ಗರಿಗಳನ್ನು  ಇಟ್ಟುಕೊಂಡಿರುವ ದರ್ಗಾ, ಮಸೀದಿಗಳ ಮೇಲೆಯೂ ದಾಳಿ ಮಾಡಿ. ಮುಸ್ಲಿಂ ಮೌಲ್ವಿಗಳ ವಿರುದ್ಧ ಕೇಸ್ ಹಾಕಿ, ರೇಡ್ ಮಾಡಿ. ಎಲ್ಲ ಮೌಲ್ವಿಗಳಿಗೂ ಏಳೇಳು ವರ್ಷ ಜೈಲು ಶಿಕ್ಷೆ ಕೊಡಿ. ಆಗ ನಿಮ್ಮ ಅರಣ್ಯ ರಕ್ಷಣೆ ಕಾಳಜಿ ಎಷ್ಟಿದೆ ಅಂತ ಗೊತ್ತಾಗುತ್ತದೆ.

ಕೇವಲ ಹಿಂದುಗಳ ನಂಬಿಕೆಗಳನ್ನೇ ಟಾರ್ಗೆಟ್ ಮಾಡಬೇಡಿ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ. ಈ ಮೂಲಕ ಹುಲಿ ಉಗುರು ಹೊಂದಿರುವವರ ತಪಾಸಣೆ ಮತ್ತು ಕ್ರಮಕ್ಕೆ ಮುಂದಾಗಿರುವ ಅರಣ್ಯ ಇಲಾಖೆ ನಡೆಯನ್ನು ಕಟುವಾಗಿ ಖಂಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅರವಿಂದ್‌ ಬೆಲ್ಲದ್‌, ಅರಣ್ಯ ಇಲಾಖೆ ಕ್ರಮದ ವಿರುದ್ಧ ಕಿಡಿಕಾರಿದ್ದಾರೆ. ಹಿಂದುಗಳ ಮೇಲಿನ ನಂಬಿಕೆಯನ್ನು ಮಾತ್ರವೇ ಟಾರ್ಗೆಟ್‌ ಮಾಡುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.

ಸತ್ತ ಪ್ರಾಣಿಗಳ ಚರ್ಮವನ್ನು ಇಟ್ಟುಕೊಳ್ಳುವ ಪದ್ಧತಿಯನ್ನು ನಮ್ಮ ಸಾಧು ಸಂತರು ಮೊದಲಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ಬಾಲಿವುಡ್‌ ‌ನಟ ಸಲ್ಮಾನ್ ಖಾನ್ ರೀತಿಯಲ್ಲಿ ಜಿಂಕೆಯನ್ನು ಸಾಯಿಸಿ ಅದರ ಚರ್ಮವನ್ನು ಇಲ್ಲಿ ಯಾರೂ ಬಳಸಿಲ್ಲ. ಕಾನೂನು ಪಾಲಿಸಿದರೆ ನೂರಕ್ಕೆ ನೂರರಷ್ಟು ಪಾಲನೆ ಮಾಡಿ. ಕಾನೂನು ಕೇವಲ ಹಿಂದು ಸಮಾಜಕ್ಕೆ ಅನ್ವಯಿಸುವುದಿಲ್ಲ, ಮುಸ್ಲಿಮರಿಗೂ ಅನ್ವಯಿಸುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ್ ಕಿಡಿಕಾರಿದ್ದಾರೆ.

ದರ್ಗಾಗಳ ಮೇಲೂ ಕ್ರಮ ವಹಿಸುವಂತಾಗಲಿ

ಹುಲಿ ಉಗುರು ಧರಿಸಿರುವ ಆರೋಪದಲ್ಲಿ ಹಿಂದುಗಳ ವಿರುದ್ಧ ಟಾರ್ಗೆಟ್ ಮಾಡಲಾಗುತ್ತಿದೆ. ಕಾನೂನಿನಲ್ಲಿ ಎಲ್ಲರಿಗೂ ಸಮಾನವಾಗಿಯೇ ಕ್ರಮವನ್ನು ತೆಗೆದುಕೊಳ್ಳಬೇಕು. ಮುಸ್ಲಿಂ ದರ್ಗಾಗಳಲ್ಲಿ ನವಿಲು ಗರಿಗಳನ್ನು ಬಳಕೆ ಮಾಡುತ್ತಾರೆ. ಇದು ಕೂಡಾ ಕಾನೂನಿಗೆ ವಿರುದ್ಧವಾಗಿದೆ. ದರ್ಗಾಗಳ ಮೇಲೂ ಕ್ರಮ ವಹಿಸುವಂತಾಗಲಿ. ಕೇವಲ ಹಿಂದು ಧರ್ಮವನ್ನು ಟಾರ್ಗೆಟ್ ಮಾಡಿ ಕೇಸ್ ಹಾಕುವಂತಾಗಬಾರದು ಎಂದು ಅರವಿಂದ ಬೆಲ್ಲದ್ ಹೇಳಿದ್ದಾರೆ.

ರಾಜ್ಯದಲ್ಲಿ ಬರ ಇದೆ, ರೈತರಿಗೆ, ಜನರಿಗೆ ವಿದ್ಯುತ್ ಸಮಸ್ಯೆ ಇದೆ. ಇದರ ಗಮನವನ್ನು ಬೇರೆ ಕಡೆ ಸೆಳೆಯಲು ಸರ್ಕಾರ ಹುಲಿ ಉಗುರು ಪ್ರಕರಣವನ್ನು ಮುನ್ನೆಲೆಗೆ ತಂದಿದೆ. ಯಾರೂ ನಿಜವಾದ ಹುಲಿಗಳಿಂದ ಉಗುರು ತಂದು ಹಾಕಿಕೊಂಡಿರುವುದಿಲ್ಲ. ಅಂತಹ ಶೂರರು ಯಾರೂ ಇಲ್ಲ. ಸತ್ತ ಹುಲಿಗಳಿಂದ ಉಗುರು ತಂದು ಹಾಕಿಕೊಂಡಿರಬಹುದು. ಹೆಚ್ಚಿನ ಜನ ಹುಲಿ ಉಗುರು ಥರ ಕಾಣೋ ಪ್ಲಾಸ್ಟಿಕ್ ಉಗುರು ಹಾಕಿಕೊಂಡಿರುತ್ತಾರೆ ಎಂದು ಅರವಿಂದ ಬೆಲ್ಲದ್‌ ಹೇಳಿದರು.

ರಾಮನಗರ ಬದಲು ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ರಚನೆ ಮಾಡುವ ರಾಜ್ಯ ಸರ್ಕಾರದ ಚಿಂತನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಅರವಿಂದ ಬೆಲ್ಲದ್, ನಮ್ಮ ದೆಹಲಿ ಸುತ್ತಮುತ್ತ ನ್ಯಾಷನಲ್ ಕ್ಯಾಪಿಟಲ್ ರೀಜನ್ (ಎನ್‌ಸಿ‌ಆರ್) ಇದೆ. ಎನ್‌ಸಿ‌ಆರ್ ಅಂದ್ರೆ ಇದಕ್ಕೆ ದೆಹಲಿ ಮತ್ತು ಗುರುಗ್ರಾಮ, ನೊಯ್ಡಾ ಸೇರಿಕೊಂಡಿದೆ. ಅಲ್ಲಿ ಏನೇ ಅಭಿವೃದ್ಧಿ ಮಾಡಿದರೂ ಎನ್‌ಸಿ‌ಆರ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತಾರೆ. ನಮ್ಮ ರಾಜ್ಯದಲ್ಲೂ ಕರ್ನಾಟಕ ಕ್ಯಾಪಿಟಲ್ ರೀಜನ್ ಮಾಡಲಿ. ಬೆಂಗಳೂರಿನ ಸುತ್ತಮುತ್ತಲಿನ ನಗರ, ಗ್ರಾಮಗಳನ್ನು ಸೇರಿಸಿ ಎನ್‌ಸಿ‌ಆರ್ ಮಾಡುವುದು ಸೂಕ್ತ. ಇದರಲ್ಲಿ ರಾಮನಗರ, ಕೊಲಾರ, ತುಮಕೂರುಗಳನ್ನು ಸೇರಿಸಿಕೊಳ್ಳಲಿ ಎಂದು ಹೇಳಿದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಹೆಸರು ಕೇಳಿ ಬರುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಅರವಿಂದ ಬೆಲ್ಲದ್, ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ಸ್ಥಾನಗಳ ಆಯ್ಕೆ ನಿರ್ಧಾರವನ್ನು ನಮ್ಮ ಪಕ್ಷದ ವರಿಷ್ಠರು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುತ್ತಾರೆ. ಈಗ ಬರುತ್ತಿರುವುದೆಲ್ಲವೂ ಊಹಾಪೋಹಗಳು. ಇವು ಮಾಧ್ಯಮಗಳಲ್ಲಿ ಮಾತ್ರ ಬರುತ್ತಿದ್ದು, ಅಧಿಕೃತ ಅಲ್ಲ ಎಂದು ಹೇಳಿದರು.

Leave a Reply