November 8, 2025
WhatsApp Image 2023-10-14 at 2.17.21 PM

ಮಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿದ ಹಲವರ ಬ್ಯಾಂಕ್ ಖಾತೆಗಳಿಂದ ಆಧಾರ್ ಎನೇಬಲ್ಡ್ ಪೇಮೆಂಟ್ ವ್ಯವಸ್ಥೆ (AEPS) ಹ್ಯಾಕ್ ಮಾಡಿ ಜನರ ಬ್ಯಾಂಕ್ ಖಾತೆಯಿಂದ ಹಣ ವಂಚಿಸಿದ ಆರೋಪದ ಮೇಲೆ ಬಿಹಾರದ ಪೂರ್ಣಿಯಾ ಜಿಲ್ಲೆಯ ಮೂವರನ್ನು ನಗರದ ಸಿಇಎನ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಕಳೆದ ಎರಡು ತಿಂಗಳಲ್ಲಿ 10 ಪ್ರಕರಣಗಳು ದಾಖಲಾಗಿತ್ತು.

ಬಂಧಿತ ಆರೋಪಿಗಳನ್ನು ಬಿಹಾರದ ಸುಪೌಲ್ ಜಿಲ್ಲೆಯ ನಿವಾಸಿ ದೀಪಕ್ ಕುಮಾರ್ ಹೆಂಬ್ರಮ್ (33), ಬಿಹಾರದ ಅರಾರಿಯಾ ಜಿಲ್ಲೆಯ ನಿವಾಸಿ ವಿವೇಕ್ ಕುಮಾರ್ ಬಿಸ್ವಾಸ್ (24) ಮತ್ತು ಬಿಹಾರದ ಅರಾರಿಯಾ ಜಿಲ್ಲೆಯ ನಿವಾಸಿ ಮದನ್ ಕುಮಾರ್ (23) ಎಂದು ಗುರುತಿಸಲಾಗಿದೆ.

ಆರೋಪಿಗಳು ಕಾವೇರಿ-2.0 ವೆಬ್‌ಸೈಟ್‌ನಿಂದ ಆಸ್ತಿ ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಅಕ್ರಮವಾಗಿ ಪಡೆದು, ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ವಿವರಗಳನ್ನು (ಹೆಬ್ಬೆಟ್ಟು ಗುರುತು) ಪಡೆದು ಸ್ಕ್ಯಾನರ್ ಮೂಲಕ ಬೆರಳಚ್ಚು ಸ್ಕ್ಯಾನ್ ಮಾಡಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.

ಆರೋಪಿಗಳಿಗೆ ಸಂಬಂಧಿಸಿದ 10 ಬ್ಯಾಂಕ್ ಖಾತೆಗಳಿಂದ 3,60,242 ರೂ.ಗಳ ವಹಿವಾಟು ಸ್ಥಗಿತಗೊಳಿಸಲಾಗಿದ್ದು, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ತಾಂತ್ರಿಕ ಪರಿಶೀಲನೆಗೊಳಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

About The Author

Leave a Reply