ಪ್ಯಾಲೆಸ್ತೀನ್ ಮೇಲೆ ಇಸ್ರೇಲ್  ದಾಳಿ ಖಂಡಿಸಿ: ಪ್ಯಾಲೆಸ್ತೀನ್ ಸಹಾಯಕ್ಕೆ ನಿಂತ ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್

ಭಟ್ಕಳ : ಪ್ಯಾಲೆಸ್ತೀನ್ ಮೇಲೆ ಇಸ್ರೇಲ್  ದಾಳಿ ಖಂಡಿಸಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ   ಐಪಿಎಲ್ ಮಾದರಿಯಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಲೀಗ್ ಪಂದ್ಯಾವಳಿ ರದ್ದು ಮಾಡಿ ಪ್ಯಾಲೆಸ್ತೀನ್ ಸಹಾಯಕ್ಕೆ ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ನಿಂತಿದೆ.

ಇದರ ಜೊತೆಗೆ ಯುದ್ಧ ಮುಗಿಯುವವರೆಗೆ ಭಟ್ಕಳದ ಮುಸ್ಲಿಮರಿಗೆ ಮದುವೆ, ಮನೋರಂಜನೆ ಖರ್ಚಿಗೆ ಮಿತಿ ಹೇರುವಂತೆ ಮುಸ್ಲಿಂ ಯೂಥ್ ಫೆಡರೇಶನ್ ಕರೆ ಕೊಟ್ಟಿದೆ.

ಈ ಕುರಿತು ಭಟ್ಕಳದಲ್ಲಿ ಮುಸ್ಲಿಂ ಯೂಥ್ ಫೆಡರೇಶನ್‌ನ ಅಧ್ಯಕ್ಷ ಆಝೀಜ್ ಉರ್ರೆಹಮಾನ್ ಮಾಧ್ಯಮ ಹೇಳಿಕೆ ನೀಡಿದ್ದು, ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್‌ನವರು ನಮ್ಮ ಸಹೋದರ ಮುಸ್ಲಿಮರನ್ನು ಹತ್ಯೆ ಮಾಡುತ್ತಿದ್ದಾರೆ. ಈ ದುಃಖದ ಸಂದರ್ಭದಲ್ಲಿ ನಾವು ಮೋಜು ಮಾಡುವುದು ಸರಿಯಲ್ಲ. ಅವರಿಗೆ ಸಹಾಯ ಮಾಡಬೇಕಿದೆ. ಭಟ್ಕಳದಲ್ಲಿ ಮುಸ್ಲಿಮರು ಮದುವೆ, ಮನೋರಂಜನೆಗೆ ಖರ್ಚು ಮಾಡುವುದನ್ನು ಕಡಿಮೆ ಮಾಡಿ ಅವರಿಗೆ ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ಭಟ್ಕಳದಲ್ಲಿ ಪ್ರತಿ ವರ್ಷ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್   ಪಂದ್ಯಾವಳಿಯನ್ನು ಮುಸ್ಲಿಂ ಯೂಥ್ ಪೆಡರೇಷನ್ ಆಯೋಜನೆ ಮಾಡಿಕೊಂಡು ಬಂದಿದೆ. ನವೆಂಬರ್ 3 ರಿಂದ ಒಂದು ತಿಂಗಳ ಕಾಲ ಐಪಿಎಲ್ ಮಾದರಿಯಲ್ಲಿ ನಡೆಯುತ್ತಿತ್ತು. ಭಟ್ಕಳ ಕ್ರಿಕೆಟ್ ಲೀಗ್-5 ಪಂದ್ಯಾವಳಿಗಾಗಿ ಕಳೆದ ತಿಂಗಳು 200 ಆಟಗಾರರನ್ನು ತಾಲೂಕಿನಲ್ಲಿ ಗುರುತಿಸಿ, ಹರಾಜು ಹಾಕಿ 12 ತಂಡವನ್ನು ಮುಸ್ಲಿಂ ಯೂಥ್ ಫೆಡರೇಶನ್ ಆಯ್ಕೆ ಮಾಡಿತ್ತು. ಇದಕ್ಕಾಗಿ ಭಟ್ಕಳ ತಾಲೂಕು ಕ್ರೀಡಾಂಗಣವನ್ನು ಆಯ್ಕೆ ಮಾಡಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಈಗ ಇಸ್ರೇಲ್ ದಾಳಿ ಖಂಡಿಸಿ ಈ ಪಂದ್ಯಾವಳಿಯನ್ನು ರದ್ದು ಮಾಡಿದ್ದು ಪ್ಯಾಲೆಸ್ತೀನ್ ಪರ ನಿಂತಿದೆ. ಹೀಗಾಗಿ ಪ್ಯಾಲೆಸ್ತೀನ್ ಮುಸ್ಲಿಂ ಜನರಿಗೆ ಸಹಾಯ ಮಾಡಲು ಭಟ್ಕಳದ ಮುಸ್ಲಿಮರು ಸಿದ್ಧರಾಗಿದ್ದಾರೆ.

Leave a Reply