ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಈಗ ಸ್ಪೋಟಕ ತಿರುವು ಪಡೆದುಕೊಂಡಿದೆ. ನಿನ್ನೆ ಒಂಟಿಯಾಗಿದ್ದಂತ ಸರ್ಕಾರಿ ಅಧಿಕಾರಿಯನ್ನು ಮನೆಗೆ ನುಗ್ಗಿ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ ಕೃತ್ಯದ ಹಿಂದೆ ಮಾಜಿ ಕಾರು ಚಾಲಕನ ಕೃತ್ಯ ಇರೋದು ಬಯಲಾಗಿದೆ. ಈ ಸಂಬಂಧ ಸರ್ಕಾರಿ ಅಧಿಕಾರಿ ಪ್ರತಿಮಾ ಅವರ ಮಾಜಿ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು ಸಿಲಿಕಾನ್ ಸಿಟಿ ಬೆಂಗಳೂರಿಗರೇ ಬೆಚ್ಚಿ ಬೀಳುವಂತೆ ಮಾಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಪ್ರತಿಮಾ ಅವರನ್ನು ಮನೆಗೆ ನುಗ್ಗಿ ಬರ್ಬರವಾಗಿ ಹತ್ಯೆ ಮಾಡಿದ್ದು ಬೇರೆ ಯಾರೂ ಅಲ್ಲ. ಅವರ ಮಾಜಿ ಕಾರು ಚಾಲಕ ಎಂಬುದಾಗಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಹಳೇ ಡ್ರೈವರ್ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ, ಪ್ರತಿಮಾ ಅವರನ್ನು ತಾನೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಪೊಲೀಸರ ಮುಂದೆ ಕೊಲೆಯ ಹಿಂದಿನ ರಹಸ್ಯ ಬಿಚ್ಚಿಟ್ಟಿರುವಂತ ಆರೋಪಿ ಕಿರಣ್, ಕೆಲ ವಿಚಾರಗಳಿಗೆ ತನ್ನ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಬಂದಿತ್ತು. ಒಂದು ವಾರದ ಹಿಂದೆ ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಇದರಿಂದ ಸಿಟ್ಟುಗೊಂಡು ಮನೆಗೆ ಬಂದು ಕೊಲೆ ಮಾಡಿ, ಪರಾರಿಯಾಗಿದ್ದಾಗಿ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರ ಬಂಧನದಲ್ಲಿ ಆರೋಪಿ ಕಿರಣ್ ಇದ್ದು, ಇನ್ನೂ ಹೆಚ್ಚಿನ ವಿಚಾರಣೆ ನಡೆಸಬೇಕಿದೆ. ಆ ಬಳಿಕ ಕೊಲೆಯ ಹಿಂದಿನ ಮತ್ತಷ್ಟು ರಹಸ್ಯ ಬಯಲಾಗಲಿದೆ.
ಅಂದಹಾಗೇ, ಪ್ರತಿಮಾ ಕೊಲೆಗೆ ಕೌಟುಂಬಿಕ ಕಾರಣವೆಂದು ಕೆಲವರು, ಅಕ್ರಮ ಕಲ್ಲು ಗಣಿಗಾರಿಕೆ ತಡೆದಿದ್ದು ಕಾರಣವೆಂದು ಕೆಲವರು, ಕಾರು ಚಾಲಕನನ್ನು ಸೇವೆಯಿಂದ ಬಿಡುಗಡೆ ಮಾಡಿದ್ದು ಕಾರಣವೆಂದು ಸುದ್ದಿ ಇತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಆಯಾಮಗಳಿಂದ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ಇಲಾಖೆಯಲ್ಲಿ ಒಳ್ಳೆಯ, ದಕ್ಷ, ಪ್ರಾಮಾಣಿಕ ಅಧಿಕಾರಿಯೆಂಬ ಹೆಸರು ಪಡೆದಿದ್ದ ಅವರನ್ನು ಹೀಗೆ ಬರ್ಬರವಾಗಿ ಹತ್ಯೆ ಮಾಡಿದ್ದು ಯಾರು ಅಂತ ಸೂಕ್ಷ್ಮವಾಗಿ ತನಿಖೆ ನಡೆಸಿದಾಗ, ಮಾಜಿ ಕಾರು ಚಾಲಕ ಕಿರಣ್ ಕೃತ್ಯ ಈಗ ಬಯಲಾದಂತೆ ಆಗಿದೆ.