
ಬೆಂಗಳೂರು: ಸರಳ ವಿವಾಹ ಪ್ರೋತ್ಸಾಹಿಸಲು ಮುಜರಾಯಿ ಇಲಾಖೆ ಸಾಮೂಹಿಕ ವಿವಾಹ ಯೋಜನೆಗೆ ‘ಮಾಂಗಲ್ಯ ಭಾಗ್ಯ’ ಮರುನಾಮಕರಣ ಮಾಡಿದ್ದು, ಈ ಮೂಲಕ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಇಟ್ಟಿದ್ದ ಸಪ್ತಪದಿ ಸರಳ ಸಾಮೂಹಿಕ ವಿವಾಹ ಯೋಜನೆಯ ಹೆಸರು ಬದಲಾವಣೆ ಮಾಡಿದೆ.



ನವೆಂಬರ್‌ನಿಂದ ಜನವರಿಯವರೆಗೆ ರಾಜ್ಯದ ಮುಜರಾಯಿ ದೇಗುಲಗಳಲ್ಲಿ ನಿಗದಿತ ದಿನಕ್ಕೆ ಸಾಮೂಹಿಕ ಸರಳ ವಿವಾಹ ನಡೆಯಲಿದೆ. ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಜರಾಯಿ ಇಲಾಖೆಯ ಎ ಮತ್ತು ಬಿ ದೇಗುಲಗಳಲ್ಲಿ ಮಾಂಗಲ್ಯ ಭಾಗ್ಯ ವಿವಾಹ ಕಾರ್ಯಕ್ರಮ ನೇರವೇರಿದೆ.
2023ರ ನವೆಂಬರ್, ಡಿಸೆಂಬರ್ ಮತ್ತು 2024ರ ಜನವರಿಯಲ್ಲಿ ಸಾಮೂಹಿಕ ವಿವಾಹಕ್ಕಾಗಿ ವಧು-ವರರ ಹೆಸರು ನೋಂದಾಯಿಸಿಕೊಳ್ಳಲು ದೇವಾಲಯಗಳು ಸಜ್ಜಾಗಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ. ನವೆಂಬರ್ ತಿಂಗಳಿನಲ್ಲಿ 16, 19 ಮತ್ತು 29ರಂದು ದಿನಾಂಕಗಳನ್ನು ಗೊತ್ತುಪಡಿಸಿದರೆ, ಡಿಸೆಂಬರ್ 7, 10ರಂದು, ಅದೇ ರೀತಿ ಜನವರಿ 28 ಮತ್ತು 31ರಂದು ದಿನಾಂಕಗಳನ್ನು ನಿಗದಿಪಡಿಸಲಾಗಿದೆ.