Visitors have accessed this post 977 times.

ದಂಡ ಕಟ್ಟಿದ್ದೇನೆ, ಇನ್ಮುಂದೆ ಕರೆಂಟ್​ ಕಳ್ಳ ಎನ್ನುವುದನ್ನು ನಿಲ್ಲಿಸಿ: ಹೆಚ್.ಡಿ.ಕುಮಾರಸ್ವಾಮಿ

Visitors have accessed this post 977 times.

ಬೆಂಗಳೂರು: “ದೀಪಾವಳಿ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ನಡೆದ ಅಚಾತುರ್ಯದ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಈಗಾಗಲೇ ನನಗೆ ಕರೆಂಟ್​ ಕಳ್ಳ ಎನ್ನುವ ಲೇಬಲ್​ ಅನ್ನು ಸಿಎಂ, ಡಿಸಿಎಂ ಹಾಗೂ ಅವರ ಪಟಾಲಂ ಸೇರಿ ಇಟ್ಟಿದ್ದಾರೆ. ನನ್ನನ್ನು ಕರೆಂಟ್​ ಕಳ್ಳ ಎನ್ನುವ ಇವರ ಆರೋಪಗಳಿಗೆಲ್ಲ ನಾನು ಹೆದರಲ್ಲ. ನಿಮ್ಮಷ್ಟು ಕಳ್ಳತನ ನಾನು ಮಾಡಿಲ್ಲ. ಬೆಸ್ಕಾಂ ನೀಡಿರುವ ಬಿಲ್​ ಹಾಗೂ ದಂಡ ಕಟ್ಟಿದ್ದೇನೆ. ಇನ್ನು ಮುಂದೆ ಕರೆಂಟ್​ ಕಳ್ಳ ಎನ್ನುವುದನ್ನು ನಿಲ್ಲಿಸಬೇಕು” ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜೆ.ಪಿ.ಭವನದಲ್ಲಿರುವ ಜೆಡಿಎಸ್​ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ದೀಪಾವಳಿ ಸಮಯದಲ್ಲಿ ನಮ್ಮ ಮನೆಯಲ್ಲಿ ಅಚಾತುರ್ಯ ಆಗಿದೆ. ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಲೈಟಿಂಗ್​ ಹಾಕಿದ್ದಕ್ಕೆ ಹೆಚ್ಚು ವಿದ್ಯುತ್​ ಖರ್ಚಾಗಲ್ಲ. ಲೈಟಿಂಗ್​ ಹಾಕಿದ್ದಕ್ಕೆ 1 ಕಿಲೋ ವ್ಯಾಟ್​ಗಿಂತಲೂ ಕಡಿಮೆ ವಿದ್ಯುತ್​ ಉಪಯೋಗ ಆಗಲಿದೆ. ಆದರೆ ಇವರು 2.5 ಕಿಲೋ ವ್ಯಾಟ್​ಗೆ ಲೆಕ್ಕ ತೆಗೆದುಕೊಂಡು, 7 ದಿನಗಳಿಗೆ 71 ಯುನಿಟ್​ ಆಗಲಿದೆ ಎಂದು ಬಿಲ್​ ಕೊಟ್ಟಿದ್ದಾರೆ. 71 ಯೂನಿಟ್​ಗೆ ಮೂರು ಪಟ್ಟು, 68,526 ರೂಪಾಯಿ ದಂಡ ವಿಧಿಸಿದ್ದಾರೆ. ಆ ಬಿಲ್​ನಲ್ಲಿ ಅವರ ಲೆಕ್ಕಾಚಾರದಲ್ಲಿ 2.5 ಕಿಲೋ ವ್ಯಾಟ್ ವಿದ್ಯುತ್​ ಉಪಯೋಗ ಆಗಿದೆ ಅಂತ ಹಾಕಿದ್ದಾರೆ. ಈ ಬಿಲ್​ ಅನ್ನು ಮರು ಪರಿಶೀಲನೆ ಮಾಡಬೇಕು. ನಮ್ಮ ಮನೆಯಲ್ಲಿ 33 ಕಿಲೋ ವ್ಯಾಟ್ ಪರ್ಮಿಷನ್ ತೆಗೆದುಕೊಂಡಿದ್ದೇನೆ. ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು. ಈ ಬಗ್ಗೆ ಮರುಪರಿಶೀಲನೆ ಆಗಬೇಕು.” ಎಂದು ಒತ್ತಾಯಿಸಿದರು. “ನಾನು ಮಹಜರು ಕಾಪಿ ಕೇಳಿದ್ದೆ. ನೀವು ಕೊಟ್ಟಿರುವ ಬಿಲ್ ಕೂಡ ಸರಿ ಇಲ್ಲ ಎಂದು ಪ್ರತಿಭಟನೆ ಕೂಡ ಮಾಡಿದ್ದೇನೆ. ಅವರು ಹಾಕಬೇಕಿದ್ದ ಬಿಲ್ 2,526 ರೂಪಾಯಿ ಆಗಬೇಕಿತ್ತು. ಆದರೆ ಅವರು 66 ಸಾವಿರ ರೂ ಬಿಲ್ ಕೊಟ್ಟಿದ್ದಾರೆ. ಮಾಜಿ ಸಿಎಂ ಆಗಿ ನನ್ನ ಪರಿಸ್ಥಿತಿಯೇ ಹೀಗೆ. ಇನ್ನು ಜನಸಾಮಾನ್ಯರ ಪರಿಸ್ಥಿತಿ ಹೇಗಿರಬಹುದು? ಪ್ರತಿ ವರ್ಷ ಮಾಡುವ ಕನಕಪುರ ಉತ್ಸವಕ್ಕೆ ಎಲ್ಲಿಂದ ಕರೆಂಟ್ ಬಳಕೆ ಆಗುತ್ತದೆ? ಕಾಂಗ್ರೆಸ್​ನವರು ಪಾದಯಾತ್ರೆ ಮಾಡಿದಾಗ ಎಲ್ಲಿಂದ ಕರೆಂಟ್ ತೆಗೆದುಕೊಂಡಿದ್ದರು. ಕನಕಪುರ ಉತ್ಸವಕ್ಕೆ ಇಡಿ ಊರಿಗೇ ಜನರೇಟರ್ ಹಾಕ್ತಾರಾ” ಎಂದು ಪ್ರಶ್ನಿಸಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಆಡಿಯೋ ವಿಚಾರ: “ಕಾಲ್​ನಲ್ಲಿ ಮಾತನಾಡಿದ್ದು ಹಣದ ವ್ಯವಹಾರ ಅಥವಾ ವರ್ಗಾವಣೆಯ ಬಗ್ಗೆ ಅಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು. ಎಂಎಲ್​ಎ ಅಲ್ಲದಿದ್ದರೂ ಜನರ ಸೇವೆ ಮಾಡುತ್ತಿದ್ದಾರಂತೆ, ಅದಕ್ಕೆ ನಾನು ಅಭಿನಂದಿಸುತ್ತೇನೆ” ಎಂದು ಹೇಳಿದರು. “ಕುಮಾರಸ್ವಾಮಿ ಹತಾಶೆ, ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ವಿದ್ಯುತ್ ಕಳ್ಳತನವನ್ನೂ ಮಾಡಿದ್ದಾರೆ ಎಂದು ಕಾಂಗ್ರೆಸ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ. ಪೆನ್​ಡ್ರೈವ್ ನಾಟಕ ಠುಸ್ ಎನ್ನುತ್ತಾರೆ. ಅಂದು ಎಷ್ಟು ಜನ ಮಂತ್ರಿಗಳಿಗೆ ಕಾಲ್ ಮಾಡಿದ್ರಿ? ದಯವಿಟ್ಟು ಬಿಟ್ ಬಿಡಿ, ನಿಮ್ಮ ಋಣದಲ್ಲಿ ಇದ್ದೇವೆ ಎಂದಿದ್ರು. ಆದರೆ ಕೇವಲ ಪೆನ್​ಡ್ರೈವ್ ತೋರಿಸಿದ್ದಕ್ಕೇ ಎಷ್ಟು ಜನ ಮಂತ್ರಿಗಳು ನಿದ್ದೆ ಬಿಟ್ರಿ?” ಎಂದು ವ್ಯಂಗ್ಯವಾಡಿದರು.

ಹ್ಯುಬ್ಲೊಟ್ ವಾಚ್ ಪ್ರಕರಣ: “ಯಾರೋ ಕಳ್ಳತನ ಮಾಡಿದ್ದ ವಾಚ್ ಅದು. ಪೊಲೀಸ್ ಅಧಿಕಾರಿ ಅದನ್ನು ಕೆಂಪಯ್ಯ ಅವರಿಗೆ ನೀಡಿದ್ದರು. ಅದರಲ್ಲಿ ಒಂದನ್ನು ಸಿದ್ದರಾಮಯ್ಯ ಅವರಿಗೆ ಕೊಟ್ಟಿದ್ದರು. ಕಳ್ಳತನದ ವಾಚನ್ನೇ ಎರಡು ವರ್ಷ ಕಟ್ಟಿಕೊಂಡು ತಿರುಗುತ್ತಿದ್ದೀರಲ್ಲ. ಅದಲ್ಲದೆ ಆಮೇಲೆ ಯಾರೋ ಗಿಫ್ಟ್ ಕೊಟ್ಟಿದ್ದು ಅಂತ ಡ್ರಾಮಾ ಮಾಡಿದ್ರು.” “2004ರ ಚುನಾವಣೆಯಲ್ಲಿ ದೇವೇಗೌಡರು ಬಡ್ಡಿಗೆ ಹಣ ತಂದಿದ್ದರು. ಆವತ್ತು ಸಿದ್ದರಾಮಯ್ಯ ಅವರು ಇದೇ ಪಕ್ಷದಲ್ಲಿ ಇದ್ದರು. ಆದರೆ ಈಗ ಲಘುವಾಗಿ ಮಾತನಾಡುತ್ತಾರೆ. ಶಾಲೆ ಕಟ್ಟಡಕ್ಕೆ ಸಿಎಸ್​ಆರ್​ ಫಂಡ್ ಎಂದು ಲಿಸ್ಟ್ ಬಿಡುಗಡೆ ಮಾಡಿದ್ದಾರೆ. ಬೆಳಿಗ್ಗೆಯಿಂದ ಈ ಬಗ್ಗೆ ಸುದ್ದಿ ಆಗಿತ್ತು. ಆದರೆ 3 ಗಂಟೆ ಮೇಲೆ ಲಿಸ್ಟ್ ಬಿಡುಗಡೆ ಮಾಡ್ತಾರೆ. ಕೇವಲ 2.5 ಲಕ್ಷ ರೂ. ಸಿಎಸ್​ಆರ್​ ಫಂಡ್ ಶಾಲೆಗೆ ತಗೊಂಡಿದಾರಾ? ಸಿಎಸ್​ಆರ್​ ಫಂಡ್ ಎಂದು ಈಗ ಹೇಳುತ್ತಾರೆ. ಯಾಕೆ ಡಿಸಿಎಂ ಬಂದ ಮೇಲೆ ಇದನ್ನು ಹೇಳಿಕೊಟ್ಟರಾ? ಯಾಕೆಂದರೆ ಡಿಸಿಎಂ ಅವರಿಗೆ ಸಿಎಸ್​ಆರ್​ ಫಂಡ್ ಎಂದರೆ ತುಂಬ ಇಷ್ಟ. ನಾನು‌ ಇದನ್ನು ಬಿಡಲ್ಲ. ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇನೆ. ನನ್ನ ಬಗ್ಗೆ ಏನು ಬೇಕಾದರೂ ಮಾತಾಡಲಿ.”

“ನಾನು ಸಿಎಂ ಆಗಿದ್ದಾಗ ಹೆಂಡತಿ, ಮಗ ಸಿಎಂ ಕಚೇರಿಯಲ್ಲಿ ಬಂದು ಕೂರಲಿಲ್ಲ. ವರುಣಾ ಕ್ಷೇತ್ರ ನೋಡಿಕೊಳ್ಳಲು ವಿಜಯ ಅಂತ ಯಾರೋ ಇದ್ದಾರಲ್ಲ. ಮಹಾದೇವನ ಹೆಸರೇಕೆ ಬಂತು ಹಾಗಿದ್ರೆ ಇಲ್ಲಿ? ಬಿಡದಿ ಜಮೀನು ಖರೀದಿಸಿ 38 ವರ್ಷ ಆಗಿದೆ. ಹೆಗಡೆ ಕಾಲದಿಂದ ಇಲ್ಲಿವರೆಗೆ ಎಷ್ಟು ತನಿಖೆ ಆಗಿದೆ? ಈ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು. ಹಳೇ ಸ್ನೇಹಿತರು ಈಗ ಮತ್ತೆ ಆ ಬಗ್ಗೆ ಮಾತಾಡಿದ್ದಾರೆ. ಜಂತಕಲ್ ಗಣಿ ಅಲ್ಲ ಅದರ ಅಪ್ಪನಂತದ್ದು ತರಲಿ. ಯಾವುದೇ ತನಿಖೆಗೂ ಹೆದರಲ್ಲ. ಬಿಡದಿ ಭೂಮಿಯನ್ನೂ ತನಿಖೆ ಮಾಡಲಿ. ಖರೀದಿ ಮಾಡಿದ ಭೂಮಿಯಲ್ಲಿ 3-4 ಎಕರೆ ಕಡಿಮೆ ಇದೆ. ಅದನ್ನು ಹುಡುಕಿಕೊಡಿ.” “24 ಎಕರೆ ಕರಾಬು ಭೂಮಿಯಲ್ಲಿ ಲುಲು ಮಾಲ್ ನಿರ್ಮಾಣ ಆಗಿದ್ದು. ಮಿನರ್ವ್ ಮಿಲ್​ಗೆ ಮೀಸಲಿಟ್ಟ ಭೂಮಿ ಅದು. ಕೆಲವೇ ದಿನಗಳಲ್ಲಿ ಎಲ್ಲ ದಾಖಲೆ ಸಹಿತ ಬಿಡುಗಡೆ ಮಾಡುತ್ತೇನೆ. ಅಲ್ಲಿ ಹೈಟೆನ್ಶನ್ ವೈಯರ್ ಇತ್ತು. ಅದನ್ನ ಅಂಡರ್ ಗ್ರೌಂಡ್ ಮಾಡಿದ್ರು. ಅದನ್ನೂ ಜನರ ಅನುಕೂಲಕ್ಕಾಗಿ ಮಾಡಿಲ್ಲ. ಅದಕ್ಕೆ ಹಣ ಕೊಟ್ರಾ ಅಥವಾ ಫ್ರೀ ಆಗಿ ಮಾಡಿಸಿಕೊಂಡರಾ ಹೇಳಲಿ. ನನಗೆ ಕಳ್ಳ ಎನ್ನುತ್ತಾರೆ, ನಕಲಿ ಸೊಸೈಟಿಯನ್ನೇ ಅಸಲಿ ಮಾಡಿದ ಇವರ ದರೋಡೆ ಗೊತ್ತಾಗಬೇಕಲ್ಲ” ಎಂದು ಹೆಚ್​ಡಿಕೆ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *