October 13, 2025
WhatsApp Image 2023-11-26 at 12.52.23 PM

ಬೆಂಗಳೂರು: ನಂಬಿಕೆ ದ್ರೋಹ ಹಾಗೂ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದ ಬಿಟಿವಿ ಎಂಡಿ ಜಿ.ಎಂ ಕುಮಾರ್ ಅವರನ್ನು ವಿಜಯನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಅವರ ಮೇಲೆ ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಜಾರಿಯಾಗಿದ್ದರಿಂದ ಕುಮಾರ್‌ನನ್ನು ಬಂಧಿಸಿ ನ್ಯಾಯಾ ಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಅವರನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬಿಟಿವಿ ಎಂಡಿ ಕುಮಾರ್ ವಿರುದ್ದ ಅಶ್ವಿನ್ ಮಹೇಂದ್ರ ಎನ್ನುವವರು 2022 ರಲ್ಲಿ ವಂಚನೆ ಪ್ರಕರಣ ಸಂಬಂಧಿಸಿದಂತೆ ದೂರು ನೀಡಿದ್ದರು

ದೂರುದಾರ ಅಶ್ವಿನ್‌ ಮಹೇಂದ್ರ ಹಾಗೂ ಕುಮಾರ್ ಇಬ್ಬರೂ ಪಾಲುದಾರಿಕೆಯಲ್ಲಿ ಈಗಲ್‌ಸೈಟ್ ಮಿಡಿಯಾ ಕಂಪನಿ ಆರಂಭಿಸಿದ್ದರು. ಇಬ್ಬರೂ ಕಂಪನಿಯ ನಿರ್ದೇಶಕರಾಗಿದ್ದರು. ಆರೋಪಿ ಕುಮಾರ್, ಒಬ್ಬರೇ ಕಾನೂನು ಬಾಹಿರವಾಗಿ ಆಡಳಿತ ಮಂಡಳಿ ಸಭೆ ನಡೆಸಲಾರಂಭಿಸಿದ್ದರು. ಅಶ್ವಿನ್ ಅವರ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದರೆಂಬ ಆರೋಪವಿತ್ತು.

ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದ ಕುಮಾರ್, ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದರು. ನೋಟಿಸ್ ಜಾರಿಯಾದರೂ ವಿಚಾರಣೆಗೆ ಹೋಗಿರಲಿಲ್ಲ. ಈತನ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ, ಇತ್ತೀಚೆಗೆ ಎನ್‌ಬಿಡಬ್ಲ್ಯು ಜಾರಿ ಮಾಡಿತ್ತು. ಆರೋಪಿ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಶನಿವಾರ ಮನೆಯ ಬಳಿ ವಾಯುವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ಕುಮಾರ್ ಅವರನ್ನು ವಶಕ್ಕೆ ಪಡೆಯಲಾಯಿತು.

About The Author

Leave a Reply