
ಮೊಂಬತ್ತಿ ಮುಂದೆ ಬಾಟಲಿಯಲ್ಲಿದ್ದ ಪೆಟ್ರೋಲ್ ಅನ್ನು ಬೈಕ್‌ಗೆ ಹಾಕುವಾಗ ಸ್ಫೋಟಗೊಂಡ ಪರಿಣಾಮ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಡೆಯೂರು ಹೋಬಳಿಯ ಕಟ್ಟಿಗೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೌಂದರ್ಯ (16) ಮೃತ ಯುವತಿ. ಸೌಂದರ್ಯ ಪಟ್ಟಣದ ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜಿನಲ್ಲಿ 10ನೇ ತರಗತಿ ಓದುತ್ತಿದ್ದರು. ಮನೆಯ ಅಂಗಡಿಯಲ್ಲಿ ವಿದ್ಯುತ್ ಇಲ್ಲದಾಗ ಮೊಂಬತ್ತಿ ಹಚ್ಚಿ ಇಡಲಾಗಿತ್ತು. ಈ ವೇಳೆ ಸೌಂದರ್ಯ ಬೈಕ್‌ಗೆ ಬಾಟಲಿಯಲ್ಲಿದ್ದ ಪೆಟ್ರೋಲ್ ಅನ್ನು ಹಾಕುತ್ತಿದ್ದಳು. ಆದರೆ ತಕ್ಷಣ ಕರೆಂಟ್ ಬಂದಿದ್ದರಿಂದ ಗಾಬರಿಗೊಂಡ ಸೌಂದರ್ಯ ಪೆಟ್ರೋಲ್ ಇದ್ದ ಬಾಟಲಿಯನ್ನು ಕೈಬಿಟ್ಟಿದ್ದಾಳೆ. ಇದರಿಂದಾಗಿ ಪೆಟ್ರೋಲ್ ಚೆಲ್ಲಿ ಮೇಣದ ಬತ್ತಿಯ ಕಿಡಿಯಿಂದ ಬೆಂಕಿ ಹತ್ತಿಕೊಂಡಿದೆ. ಬೆಂಕಿ ತೀವ್ರತೆ ಹೆಚ್ಚಿದ್ದು, ಅಂಗಡಿ ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿದೆ. ಅಷ್ಟೇ ಅಲ್ಲದೇ ಘಟನೆ ವೇಳೆ ಸೌಂದರ್ಯ ತೀವ್ರ ಗಾಯಗೊಂಡಿದ್ದಳು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


