
ಕಡಬ: ಮಾಜಿ ಯೋಧರೊಬ್ಬರಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ಹೋಮ್ ಸ್ಟೇ ಗೆ ಕರೆದುಕೊಂಡು ಹೋಗಿ ಮಹಿಳೆಯನ್ನು ತೋರಿಸಿ ಮದುವೆಯ ನಾಟಕವಾಡಿ ಬಳಿಕ ಅದೇ ಫೋಟೊ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ಪೀಕಿಸಿದ ಪ್ರಕರಣವೊಂದು ಮಡಿಕೇರಿಯಿಂದ ವರದಿಯಾಗಿದೆ.



64 ವರ್ಷದ ಮಾಜಿ ಯೋಧನಿಗೆ ವಂಚಿಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದು, ಇನ್ನೊರ್ವ ತಪ್ಪಿಸಿಕೊಂಡಿದ್ದಾನೆ. ಬಂಧಿತರನ್ನು ದ.ಕ. ಜಿಲ್ಲೆಯ ಬಂಟ್ವಾಳದ ನಿವಾಸಿ ಅಬ್ದುಲ್ ಬಶೀರ್ (29,) ಕಡಬದ ನಿವಾಸಿ ಸಾಧಿಕ್, (30) ಫೈಸುಲ್ ಎಂದು ಗುರುತಿಸಲಾಗಿದ್ದು, ಈ ಪೈಕಿ ಫೈಸುಲ್ ಈಗಾಗಲೇ ಬೇರೊಂದು ಪ್ರಕರಣದಲ್ಲಿ ಮೈಸೂರಿನಲ್ಲಿ ಬಂಧನವಾಗಿದ್ದಾನೆ. ಇನ್ನೋರ್ವ ಆರೋಪಿ ಅಮೀರ್ ತಲೆಮರೆಸಿಕೊಂಡಿದ್ದಾನೆ.
ಬಂಧಿತರಿಂದ ಮಾಜಿ ಯೋಧನ ಬಳಿಯಿಂದ ಪೀಕಿಸಿದ 8 ಲಕ್ಷ ರೂ. ನಗದು ಹಾಗೂ 2,00,000 ರೂ. ಚೆಕ್ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಕೃತ್ಯದಲ್ಲಿ ಭಾಗಿಯಾದ ಮಹಿಳೆಯ ವಿಚಾರ ತಿಳಿದುಬಂದಿಲ್ಲ.
ಪ್ರಕರಣದ ಹಿನ್ನೆಲೆ: ಕೇರಳದ ಎರ್ನಾಕುಲಂ ಜಿಲ್ಲೆಯ ನಿವಾಸಿ 64 ವಯಸ್ಸಿನ ಮಾಜಿ ಯೋಧ ಜಾನ್ ಮ್ಯಾಥ್ಯು ಮೋಸ ಹೋದವರು. ಮೊದಲಿಗೆ ಆರೋಪಿಗಳು ಇವರನ್ನು ಮದುವೆಯಾಗುವಂತೆ ಪುಸಲಾಯಿಸಿದ್ದಾರೆ. ಮದುವೆಯಾಗಲು ಒಳ್ಳೆಯ ಒಂದು ಹುಡುಗಿ ಇದ್ದಾಳೆ ಎಂದು ಹೇಳಿ ಅವರನ್ನು ನಂಬಿಸಿದ ವಂಚಕರು ನವೆಂಬರ್ 26ರಂದು ಮಡಿಕೇರಿಯ ಹೋಂಸ್ಟೇಯೊಂದಕ್ಕೆ ಕರೆಸಿದ್ದಾರೆ. ಅಲ್ಲಿ ಮಹಿಳೆಯೊಬ್ಬರನ್ನು ತೋರಿಸಿದ್ದಾರೆ. ಬಳಿಕ ಅಲ್ಲಿಯೇ ಆ ಮಹಿಳೆಗೆ ಮದುವೆ ಮಾಡಿಸಿ, ಇಬ್ಬರಿಗೂ ಹೋಂಸ್ಟೇನಲ್ಲೇ ಆ ದಿನ ತಂಗಲು ಅವಕಾಶ ನೀಡಿದ್ದಾರೆ. ನಂತರ ಅದೇ ದಿನ ಸಂಜೆ ಆರೋಪಿಗಳು ಮದುವೆಯ ಫೋಟೋವನ್ನು ಜಾನ್ ಅವರಿಗೆ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿ 10 ಲಕ್ಷ ರೂಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಹಣ ಕೊಡದಿದ್ದರೆ ಫೋಟೋವನ್ನು ಕುಟುಂಬದವರಿಗೆ ತೋರಿಸುವುದಾಗಿ ಬೆದರಿಸಿದ್ದಾರೆ. ಜಾನ್ ಅವರಿಂದ 8 ಲಕ್ಷ ನಗದು ಹಾಗೂ 2 ಲಕ್ಷ ರೂಪಾಯಿ ಚೆಕ್ ಪಡೆದು ಆರೋಪಿಗಳು ಪರಾರಿಯಾಗಿದ್ದರು. ವಂಚನೆಗೊಳಗಾದ ಜಾನ್ ಮ್ಯಾಥ್ಯು ಅವರು, ಮಡಿಕೇರಿ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಂದ ನಗದು, 3 ಮೊಬೈಲ್ ಹಾಗೂ ಚೆಕ್ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಮಡಿಕೇರಿ ಡಿವೈಎಸ್‌ಪಿ ಜಗದೀಶ್ ಎಂ., ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ, ಡಿಸಿಆರ್‌ಬಿ ಇನ್ಸ್‌ಪೆಕ್ಟರ್ ಐ.ಪಿ. ಮೇದಪ್ಪ, ನಗರ ಠಾಣಾಧಿಕಾರಿ ಲೋಕೇಶ್, ಪೊಲೀಸ್ ಸಿಬ್ಬಂದಿ, ಮಹಿಳಾ ಸಿಬ್ಬಂದಿ ಭಾಗವಹಿಸಿದ್ದರು.