Visitors have accessed this post 470 times.
ಪುತ್ತೂರು: ಕುಂಬ್ರ ದಲ್ಲಿ ಟಿಪ್ಪರ್ ಚಾಲಕನಾಗಿದ್ದ ಬಾಗಲಕೋಟೆ ಬಾದಾಮಿ ಮೂಲದ ಹನುಮಂತ ಮಾದರ (22) ಕೊಲೆ ಪ್ರಕರಣದ 3ನೇ ಆರೋಪಿ ದುರ್ಗಪ್ಪ ಮಾದರನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಅಪಹರಣಕ್ಕೆ ಬಳಸಿದ್ದ ವಾಹನ ಮತ್ತು ಕೊಲೆ ಮಾಡಲು ಬಳಸಲಾಗಿದ್ದ ರಾಡ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ನ. 17ರಂದು ಹನುಮಂತ ಮಾದರ ನನ್ನು ಕುಂಬ್ರದಿಂದ ಮೂವರು ಸೇರಿ ವಾಹನವೊಂದರಲ್ಲಿ ಕರೆದೊಯ್ದು ಮಾಡಿ ಮೃತದೇಹವನ್ನು ಆಗುಂಬೆ ಘಾಟಿ ಸಮೀಪ ಎಸೆದು ಹೋಗಿದ್ದರು. ಡಿ. 8ರಂದು ಮೃತದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಬಾದಾಮಿ ತಾಲೂಕು ಡಾಣಕಶಿರೂರು ನಿವಾಸಿ ಹನುಮಪ್ಪ ಮಾದರ, ತಾಲೂಕು ಜಗಳೂರು ಗ್ರಾಮ ಅಂಬೇಡ್ಕರ್ ನಗರ ನಿವಾಸಿ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದರು. ಇನ್ನೋರ್ವ ಆರೋಪಿ ಬೆಳಗಾವಿ ರಾಮದುರ್ಗಾ ಗ್ರಾಮದ ಮನೇನಕೊಪ್ಪ ನಿವಾಸಿ ದುರ್ಗಪ್ಪ ಮಾದರ ಪರಾರಿಯಾಗಿದ್ದು, ಇದೀಗ ಆತನನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಪೆಟ್ರೋಲ್ ಪಂಪ್ ಒಂದರ ಬಳಿಯಿಂದ ಮತ್ತು ಕೊಲೆ ಮಾಡಲು ಉಪಯೋಗಿಸಿದ ರಾಡ್ ವೊಂದನ್ನು ಆಗುಂಬೆ ಘಾಟಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಕೊಲೆ ಆರೋಪಿ ಶಿವಪ್ಪ ಹನುಮಂತ ಮಾದರ ಅವರ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ಹನುಮಂತ ಮಾದರ ಅವರ ಕೊಲೆ ನಡೆದಿತ್ತು ಎನ್ನಲಾಗಿದೆ.