
ಹೊಸ ವರ್ಷದ ಮುನ್ನಾ ದಿನದ ಆಚರಣೆಗಳ ಬಗ್ಗೆ ಡಿಸೆಂಬರ್ 28 ರಂದು ಸಂಜೆ 5 ಗಂಟೆಯೊಳಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಅಗತ್ಯ ಅನುಮತಿಯನ್ನು ಪಡೆಯಬೇಕು ಎಂದು ಪೊಲೀಸ್ ಕಮೀಷನರ್ ಅಗರ್‌ವಾಲ್ ಹೇಳಿದ್ದಾರೆ. ಹಾಗೆಯೇ ಡಿಸೆಂಬರ್ 31 ರ ಮಧ್ಯರಾತ್ರಿಯೊಳಗೆ ಎಲ್ಲಾ ಕಾರ್ಯಕ್ರಮಗಳು ಮುಕ್ತಾಯ ಮಾಡಲು ಸೂಚಿಸಿದ್ದಾರೆ.



ಹೋಟೆಲ್, ರೆಸ್ಟೋರೆಂಟ್, ಕ್ಲಬ್, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕ ಹೊಸ ವರ್ಷಾಚರಣೆ ಮಾಡುವ ಸಂದರ್ಭ ಕೆಲವೊಂದು ನಿಯಮಗಳನ್ನು ಅನುಸರಿಸಬೇಕೆಂದು ಪೊಲೀಸ್ ಕಮೀಷನರ್ ಸೂಚನೆಗಳನ್ನು ಹೊರಡಿಸಿದ್ದಾರೆ.
ಕಡಲತೀರದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವವರಿಗೆ ಯೋಗ್ಯ ವಾತಾವರಣವನ್ನು ಕಾಪಾಡಿಕೊಳ್ಳುವುದು, ಅಶ್ಲೀಲ ನೃತ್ಯ ನಿಷೇಧ, ಯಾವುದೇ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗದಂತೆ ಖಾತ್ರಿ ಪಡಿಸುವ ಕುರಿತು ಪ್ರಾಮುಖ್ಯತೆಯನ್ನು ಹೇಳಿದ್ದಾರೆ. ಶಬ್ದಮಾಲಿನ್ಯ ನಿಯಮಾವಳಿಗಳನ್ನು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಎಲ್ಲರೂ ಪಾಲಿಸಬೇಕು, ಡಿಜೆ ಸಂಗೀತಕ್ಕೆ ಅನುಮತಿ ಇಲ್ಲ ಎಂದು ಹೇಳಿದ್ದಾರೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ನಿಗಾ ಇಡಲು ಟ್ರಾಫಿಕ್ ಪೊಲೀಸರು ಇರಲಿದ್ದಾರೆ. ವೀಲಿಂಗ್, ಡ್ರ್ಯಾಗ್ ರೇಸಿಂಗ್, ಕಿರುಚಾಟ ಅಥವಾ ಅತಿವೇಗದ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.