
ಬಂಟ್ವಾಳ: ಪಾದಚಾರಿ ಯುವತಿಯೋರ್ವಳಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವಳು ಮಧ್ಯರಾತ್ರಿ ವೇಳೆ ಮೃತಪಟ್ಟ ಘಟನೆ ನಡೆದಿದೆ.



ಬಿಸಿರೋಡಿನ ಕೈಕಂಬ ಸಮೀಪದ ಪಚ್ಚಿನಡ್ಕ ಎಂಬಲ್ಲಿ ರಾತ್ರಿ 8 ಗಂಟೆ ವೇಳೆ ಅಪಘಾತ ನಡೆದಿತ್ತು.
ಇಲ್ಲಿನ ಸ್ಥಳೀಯ ನಿವಾಸಿ ಚೈತ್ರ (22 ) ಮೃತಪಟ್ಟ ಯುವತಿ.
ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಚೈತ್ರ ಸಂಜೆ ಕೆಲಸ ಬಿಟ್ಟು ಬಸ್ ನಿಂದ ಇಳಿದು ತಾಯಿ ಜೊತೆಗೆ ಮನೆಯ ಕಡೆಯ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಸ್ನೇಹಿತೆಯೋರ್ವಳ ಮದುವೆಯ ರೋಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನಲೆಈಕೆ ಕೆಲಸಕ್ಕೆ ರಜೆ ಪಡೆದುಕೊಂಡು ಸಂಜೆ ವೇಳೆ ಮನೆಯಿಂದ ತಾಯಿ ಜೊತೆ ನಡೆದುಕೊಂಡು ಹೋಗುತ್ತಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ.
ತಾಯಿ ಜೊತೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಸ್ವಿಫ್ಟ್ ಕಾರು ಚೈತ್ರಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ಪರಿಣಾಮ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಇವಳನ್ನು ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಟ್ರಾಫಿಕ್ ಎ.ಎಸ್.ಐ.ಸುರೇಶ್ ಪಡಾರ್ ಹಾಗೂ ಹೆಚ್.ಸಿ.ರಮೇಶ್ ಖಾಸಗಿ ವಾಹನದ ಮೂಲಕ ಗಾಯಳುವನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಗಂಭೀರ ಗಾಯಗೊಂಡ ಈಕೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.