ಮಂಗಳೂರು: ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದ ಮಂಗಳೂರು ಜಪ್ಪಿನಮೊಗರು ನಿವಾಸಿ ಇಸ್ಮಾಯಿಲ್ ದಂಡರಕೋಲಿ(65) ಎಂಬವರು ಕಳೆದ 9 ತಿಂಗಳಿನಿಂದ ಸೌದಿಯಲ್ಲಿ ಜೈಲು ಪಾಲಾಗಿದ್ದಾರೆ. ಇಸ್ಮಾಯಿಲ್ ರವರನ್ನು ಜೈಲಿನಿಂದ ಪಾರು ಮಾಡುವಂತೆ ಅವರ ಕುಟುಂಬಸ್ಥರು ವಿದೇಶಾಂಗ ಇಲಾಖೆಗೆ ಪತ್ರ ಬರೆದಿದ್ದಾರೆ. ಇಸ್ಮಾಯಿಲ್ ದಂಡರಕೋಲಿ ಕಳೆದ 27 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಉದ್ಯಮ ನಡೆಸುತ್ತಿದ್ದಾರೆ. 10 ವರ್ಷಗಳಿಂದ ರಿಯಾದ್ ನಲ್ಲಿ ಲಾಂಡ್ರಿ ಶಾಪ್ ನಡೆಸುತ್ತಿದ್ದರು. ಇಸ್ಮಾಯಿಲ್ ಕೇರಳದ ಇಬ್ಬರು ಮತ್ತು ಈಜಿಪ್ಟ್ ದೇಶದ ಒಬ್ಬರಲ್ಲಿ ಸಾಲ ಪಡೆದು ಈ ಉದ್ಯಮ ಆರಂಭಿಸಿದ್ದರು. ಲಾಂಡ್ರಿ ಉದ್ಯಮದಲ್ಲಿ ನಷ್ಟಕ್ಕೊಳಗಾಗಿ ಅದನ್ನು ಕಳೆದುಕೊಂಡಿದ್ದರು. ಅದರ ಮಾಲೀಕರು ಲಾಂಡ್ರಿ ಶಾಪ್ ಅನ್ನು ಬೇರೆಯವರಿಗೆ ನೀಡಿದ್ದರು. ಈ ನಡುವೆ ತನ್ನ ಹಣ ಪಡೆದು ವಂಚಿಸಿದ್ದಾನೆಂದು ಇಸ್ಮಾಯಿಲ್ ವಿರುದ್ಧ ಈಜಿಪ್ಟ್ ಪ್ರಜೆ ದೂರು ನೀಡಿದ್ದಾನೆ. ಆದ್ದರಿಂದ ವಂಚನೆ ಪ್ರಕರಣದಲ್ಲಿ ಇಸ್ಮಾಯಿಲ್ ಅವರನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ. ಆದರೆ 65 ವರ್ಷದ ಇಸ್ಮಾಯಿಲ್ ತೀವ್ರ ಮಧುಮೇಹ ಮತ್ತು ಬಿಪಿಯಿಂದ ಬಳಲುತ್ತಿದ್ದು, ಜೈಲಿನಲ್ಲಿ ತೊಂದರೆಗೆ ಸಿಲುಕಿದ್ದಾರೆ. ಆದ್ದರಿಂದ ಇಸ್ಮಾಯಿಲ್ ಅವರ ಪುತ್ರಿ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ನೆರವು ಯಾಚಿಸಿದ್ದಾರೆ. ಎಂಬೆಸ್ಸಿಯಿಂದ ಅವರ ಕುಟುಂಬಸ್ಥರಿಗೆ ಮರುದಿನವೇ ಫೋನ್ ಕರೆ ಬಂದಿದ್ದು, ಜೈಲಿನಿಂದ ಬಿಡುಗಡೆಗೆ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಸೌದಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಮಂದಿಗೂ ಸಹಾಯ ಕೇಳಿದ್ದೇವೆ. ಇಸ್ಮಾಯಿಲ್ ಈಜಿಪ್ಟ್ ಪ್ರಜೆಯಿಂದ 15 ಸಾವಿರ ರಿಯಾಲ್ ಪಡೆದಿದ್ದರು. 6 ಸಾವಿರ ರಿಯಾಲ್ ಹಿಂತಿರುಗಿಸಿ 9 ಸಾವಿರ ಬಾಕಿಯಿತ್ತು. ಆದರೆ ಬಡ್ಡಿ ಮೊತ್ತ ಸೇರಿಸಿ 38 ಸಾವಿರ ರಿಯಾಲ್ ಬಾಕಿಯೆಂದು ದೂರು ನೀಡಲಾಗಿದೆ. ಆ ಹಣವನ್ನು ಕೋರ್ಟಿಗೆ ಕಟ್ಟಿದರೆ ಬಿಡುಗಡೆ ಆಗಬಹುದು. ಸದ್ಯ ಇಸ್ಮಾಯಿಲ್ ಅವರ ಆರೋಗ್ಯದಲ್ಲೂ ಏರುಪೇರಾಗಿದೆ ಎಂದು ಅವರ ಕುಟುಂಬಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.