ಹೈಕೋರ್ಟ್‌ನಲ್ಲಿ ಜಡ್ಜ್ ಮುಂದೆ ಕತ್ತು ಕೊಯ್ದುಕೊಂಡ ವ್ಯಕ್ತಿ

ಬೆಂಗಳೂರು: ಕರ್ನಾಟಕ ರಾಜ್ಯ ಹೈಕೋರ್ಟ್‌ನಲ್ಲಿ ಅಪರೂಪದ ಘಟನೆ ನಡೆದಿದೆ. ನ್ಯಾಯ ಕೊಡುವ ನ್ಯಾಯಮೂರ್ತಿಗಳ ಮುಂದೆಯೇ ಪ್ರಕರಣದ ವಿಚಾರಣೆಗೆ ಬಂದಿದ್ದ ವ್ಯಕ್ತಿ ಬ್ಲೇಡ್‌ನಿಂದ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ.

ರಾಜ್ಯ ರಾಜಧಾನಿ ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಆತನನ್ನು ರಕ್ಷಿಸಿ ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಲ್ಲೇ ಇದ್ದ ಪೊಲೀಸರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರು ಎಂದು ತಿಳಿದು ಬಂದಿದೆ. ಕೈ ಹಾಗೂ ಕತ್ತಿನ ಭಾಗವನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಸಿದ್ದಾನೆ ಎಂದು ತಿಳಿದು ಬಂದಿದೆ.

ಇಂದು ಮಧ್ಯಾಹ್ನ 1.15 ರ ಸುಮಾರಿಗೆ ಈ ಘಟನೆ ನಡೆದಿದೆ. ಪ್ರಾಥಮಿಕ ವಿಚಾರಣೆಯ ಪ್ರಕಾರ ಆತ ಮೈಸೂರು ಮೂಲದವನಾಗಿದ್ದು, ಫೈಲುಗಳ ಸಮೇತ ಕೋರ್ಟ್ ಹಾಲ್‌ಗೆ ಬಂದಿದ್ದ ವ್ಯಕ್ತಿ ತನ್ನ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ನ್ಯಾಯಾಧೀಶರ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ತಕ್ಷಣ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆದೊಯ್ಯುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದು, ಆಗ ಕೂಡಲೇ ವ್ಯಕ್ತಿಯನ್ನ ವಶಕ್ಕೆ ಪಡೆದು ಪೊಲೀಸರು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮೂಲಗಳ ಪ್ರಕಾರ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಶ್ರೀನಿವಾಸ್ (51) ಎಂದು ಗುರುತಿಸಲಾಗಿದ್ದು, ಹರಿತವಾದ ಆಯುಧಗಳೊಂದಿಗೆ ಬಂದಿದ್ದ ವ್ಯಕ್ತಿ ಸಿಜೆ ಪೀಠದ ಮುಂದೆಯೇ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಸದ್ಯ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಹೈಕೋರ್ಟ್‌ಗೆ ಭೇಟಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಪೂರ್ವಾಪರದ ಬಗ್ಗೆ ವಿಚಾರಣೆ ನಡೆಸಲು ಸೂಚಿಸಿದ್ದಾರೆ.

Leave a Reply