ಮಂಗಳೂರು: ‘‘ರಾಜ್ಯದಲ್ಲಿ ಅತ್ಯಂತ ಬಡ ಕ್ಯಾಂಡಿಡೇಟ್‌ಗಳಲ್ಲಿ ನಾನೂ ಕೂಡಾ ಒಬ್ಬ. ಈ ಜಿಲ್ಲೆಯಲ್ಲಿ ಬೇರೆ ಬೇರೆ ಊರುಗಳಲ್ಲಿರುವ ಅಭಿಮಾನಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸವೇ ನನ್ನ ಚಿರ ಆಸ್ತಿಯಾಗಿದೆ. ಅದು ಬಿಟ್ಟು ಬೇರೇನು ನನ್ನಲ್ಲಿ ಇಲ್ಲ’’ ಹೀಗೆಂದವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪದ್ಮರಾಜ್ ಆರ್. ಪೂಜಾರಿ.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ದೇಶಕಂಡ ಪ್ರಬುದ್ಧ, ಸಚ್ಛಾರಿತ್ರ್ಯದ, ಪ್ರಾಮಾಣಿಕ ರಾಜಕಾರಣಿ ಎಂದು ವಿಪಕ್ಷಗಳಿಂದ ಕರೆಸಿಕೊಂಡವರು. ಅವರ ಗರಡಿಯಲ್ಲಿ ಪಳಗಿದವನು ನಾನು. ಸುಮಾರು 33-34 ವರ್ಷಗಳಿಂದ ಅವರೊಂದಿಗೆ ಅವರೊಟ್ಟಿಗೆ ನಿಕಟ ಸಂಪರ್ಕ ಇಟ್ಟುಕೊಂದ್ದೇನೆ. ಬಿ. ಜನಾರ್ದನ ಪೂಜಾರಿ ತಮ್ಮ ಬಳಿ ಸಹಾಯ ಯಾಚಿಸಿ ಬರುವ ಬಡವರ ಕಷ್ಟಗಳಿಗೆ ಹೇಗೆ ಸ್ಪಂದಿಸುತ್ತಿದ್ದರು ಎನ್ನುವುದನ್ನು ಹತ್ತಿರದಿಂದ ನೋಡಿದವನು. ಅದಕ್ಕಿಂತ ಮುಖ್ಯವಾಗಿ ನಾನೂ ಕೂಡಾ ಬಡತನದಲ್ಲಿ ಬೆಳೆದವನು. ನಾನು ನನ್ನ ಅಫಿಡವಿಟ್‌ನ್ನು ಸಲ್ಲಿಸಿದ್ದೇನೆ. ಅದರಲ್ಲಿ ನನ್ನ ಆಸ್ತಿ ಏನೆಂಬುದನ್ನು ನೋಡಬಹುದು ಎಂದರು.
ಕಾಂಗ್ರೆಸ್ ಪಕ್ಷ ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಪದ್ಮರಾಜ್ ಯಾವತ್ತೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭಾರತೀಯ ಕಾಂಗ್ರೆಸ್ ಪಕ್ಷ ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿದೆ. ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ರಾಜ್ಯ ಮತ್ತು ಜಿಲ್ಲಾ ನಾಯಕರ, ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಾನು ನಾಮಪತ್ರ ಸಲ್ಲಿಸಿದ್ದೇನೆ. ಈ ಹೊತ್ತು ಜನರಲ್ಲಿ ಹೊಸ ಹುರುಪು, ಹುಮ್ಮಸ್ಸು ಕಂಡು ಬಂದಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆ ತುಳುನಾಡ ಜಿಲ್ಲೆಯಾಗಿದೆ. ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಈ ಜಿಲ್ಲೆ ಸೌಹಾರ್ದತೆಗೆ ಒಂದೊಮ್ಮೆ ಹೆಸರಾಗಿತ್ತು. ಜಾತಿ , ಧರ್ಮವನ್ನು ಮೀರಿದ ಸಂಸ್ಕೃತಿಯನ್ನು ಹೊಂದಿರುವ ಈ ಜಿಲ್ಲೆ ಜಾಗತಿಕವಾಗಿ ಗಮನ ಸೆಳೆದಿತ್ತು. ಎಲ್ಲರಿಗೂ ಗೌರವದಿಂದ ಬದುಕುವ ಅವಕಾಶ ಇತ್ತು. ಆದರೆ ಕಳೆದ ಮೂವತ್ತು ವರ್ಷಗಳಿಂದ ಇಲ್ಲಿನ ಸಂಸ್ಕೃತಿ, ಸಂಸ್ಕಾರಕ್ಕೆ ಧಕ್ಕೆ ಉಂಟಾಗಿದೆ. ಜಾತಿ, ಧರ್ಮಗಳ ನಡುವೆ ಕಂದಕ ಉಂಟಾಗಿ ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಬ್ಲಾಕ್ ಲೀಸ್ಟ್‌ನಲ್ಲಿ ಸೇರಿಕೊಂಡಿದೆ. ಹೀಗಾಗಿ ಇಲ್ಲಿಗೆ ಈಗ ಯಾವುದೇ ಕೈಗಾರಿಕೆಗಳು, ಉದ್ದಿಮೆಗಳು ಸ್ಥಾಪನೆ ಆಗುತ್ತಿಲ್ಲ. ಬಂಡವಾಳ ಹರಿದು ಬರುತ್ತಿಲ್ಲ. ಈಗ ಇಲ್ಲಿನ ಜನರಿಗೆ, ಮತದಾರರಿಗೆ ಇವೆಲ್ಲವುಗಳ ಅರಿವಾಗಿದೆ. ಜನರು ಬದಲಾವಣೆ ಬಯಸಿದ್ದಾರೆ. ತುಳುನಾಡಿನಲ್ಲಿ ಹಿಂದೆ ಇದ್ದ ಎಲ್ಲರೂ ಪರಸ್ಪರ ಗೌರವ, ಸೌಹಾರ್ದತೆ, ಪ್ರೀತಿ ವಿಶ್ವಾಸದಿಂದ ಬದುಕುವ ವಾತಾವರಣವನ್ನು ಕಲ್ಪಿಸಿಕೊಡುವುದು ನನ್ನ ಆದ್ಯತೆಯಾಗಿದೆ ಎಂದರು.
ಮೊದಲು 40 ವರ್ಷಗಳ ಕಾಲ ಇಲ್ಲಿಂದ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿದ್ದ ಕಾಂಗ್ರೆಸ್ ಎಂಪಿಗಳು ಮಾಡಿರುವ ಅಭಿವೃದ್ಧಿ ಕಾರ್ಯಗಳು ಮಾತ್ರ ಇವತ್ತು ನಮ್ಮ ಮುಂದೆ ಕಾಣಿಸಿಕೊಳ್ಳುತ್ತಾ ಇದೆ. ಆ ಬಳಿಕ ಅಧಿಕಾರದ ಸವಿಯನ್ನುಂಡ ಬಿಜೆಪಿ ಸಂಸದರು ಕಳೆದ 34 ವರ್ಷಗಳಲ್ಲಿ ಜನರಿಗೇನು ಕೊಟ್ಟಿದ್ದಾರೆ, ಜಿಲ್ಲೆಯ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ನಾವು ಮೊನ್ನೆಯಿಂದ ಕೇಳುತ್ತಿದ್ದೇವೆ. ಆದರೆ ಅವರಿಂದ ಉತ್ತರ ಬಂದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಅಧಿಕಾರರೂಢ ಕಾಂಗ್ರೆಸ್ ಸರಕಾರ 11 ತಿಂಗಳಲ್ಲಿ ಮಾಡಿದ ಸಾಧನೆಗಳು , ಜಾರಿಗೊಳಿಸಿದ ಯೋಜನೆಗಳು ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದರು ನೀಡಿರುವ ಕೊಡುಗೆಗಳನ್ನು ಜನರ ಮುಂದಿಟ್ಟು ಕಾಂಗ್ರೆಸ್ ಮತ ಯಾಚಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿದ್ದ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ, ಬಡವರ ಮನೆಯಲ್ಲಿ ಗೃಹಿಣಿಯರ ಮುಖದಲ್ಲಿ ನೆಮ್ಮದಿಯ ನಗು ಕಾಣುವಂತಾಗಿದೆ. ಅವರಿಗೆ ಬೆಲೆ ಏರಿಕೆಯನ್ನು ನಿಭಾಯಿಸಲು, ಮಕ್ಕಳ ಶಿಕ್ಷಣದ ವೆಚ್ಚವನ್ನು ನಿಭಾಯಿ ಸಲು ಮತ್ತು ಕುಟುಂಬದ ಸದಸ್ಯ ಅನಾರೋಗ್ಯಕ್ಕೆ ತುತ್ತಾದಾಗ ಅದನ್ನು ಎದುರಿಸಲು ಮಹಿಳೆಯರಿಗೆ ಧೈರ್ಯ ಸಿಕ್ಕಿದೆ ಎಂದರು.