
ಉಳ್ಳಾಲ: ತಾಲೂಕಿನ ಕೋಟೆಕಾರು ಗ್ರಾಮದ ಕೊಂಡಾಣ ಕ್ಷೇತ್ರದ ಭಂಡಾರ ಮನೆಗೆ ಅಳವಡಿಸಲಾಗಿದ್ದ 6 ಸಿಸಿ ಕ್ಯಾಮೆರಾಗಳು ಕಳವಾಗಿದ್ದವು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.



ಬೀರಿ ಕೊಂಡಾಣ ನಿವಾಸಿ ಶುಭಾಶ್ ಚಂದ್ರ ಬಂಧಿತ ಆರೋಪಿ. ಹಾಗೂ ಕಳವಾಗಿದ್ದ ಆರು ಸಿಸಿ ಕ್ಯಾಮೆರಾಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಂಡಾರ ಮನೆ ಧ್ವಂಸಗೊಳಿಸಿದ್ದ ಪ್ರಕರಣ ನಡೆದ ಬೆನ್ನಲ್ಲೇ ಕ್ಷೇತ್ರಕ್ಕೆ ಅಳವಡಿಸಲಾಗಿದ್ದ ಆರು ಸಿಸಿ ಕ್ಯಾಮೆರಾಗಳು ಕಳವಾಗಿತ್ತು. ಇನ್ನು ಕ್ಯಾಮೆರಾಗಳು ಕಳವಾಗಿರುವುದು ಗುರುವಾರ ಬೆಳಕಿಗೆ ಬಂಧಿತ್ತು. ಈ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಅವರು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಳಿಕ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಕೊಂಡಾಣ ಕ್ಷೇತ್ರದ ಕಚೇರಿಯಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್ ನಲ್ಲಿ ಸೆರೆಯಾಗಿದ್ದ ಆರೋಪಿಯ ಚಹರೆ ಆಧರಿಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಂಧಿತ ಆರೋಪಿಯು ಮಾನಸಿಕ ರೋಗಿಯಾಗಿದ್ದಾನೆ. ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.