Visitors have accessed this post 608 times.
ಬಂಟ್ವಾಳ : ಕಾರು ಡಿಕ್ಕಿಯಾದ ವಿಚಾರಕ್ಕೆ ದಂಪತಿಗೆ ನಾಲ್ವರ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಕಲ್ಲಡ್ಕದ ಕರಿಂಗಾನ ಕ್ರಾಸ್ ಎಂಬಲ್ಲಿ ನಡೆದಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುತ್ತೂರು ಏರ್ಮುಂಜ ಪಲ್ಲ ನಿವಾಸಿಗಳಾದ ಮಂಜುನಾಥ್ ಮತ್ತು ಅವರ ಪತ್ನಿ ಪೂರ್ಣಿಮಾ ಹಲ್ಲೆಗೊಳಗಾದವರು. ಮಂಜುನಾಥ್ ಮಂಗಳೂರಿನಿಂದ ಪುತ್ತೂರು ಕಡೆಗೆ ಕಾರಿನಲ್ಲಿ ಪತ್ನಿಯೊಂದಿಗೆ ತೆರಳುತ್ತಿದ್ದರು. ಈ ವೇಳೆ ಕಲ್ಲಡ್ಕ ಸಮೀಪದ ನರಹರಿ ಎಂಬಲ್ಲಿ ಇವರ ಕಾರಿಗೆ ಹರಿಯಾಣ ಮೂಲದ ಕಾರೊಂದು ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿಯಾಗಿದೆ. ಈ ಸಂದರ್ಭ ಇವರು ಕೈ ಸನ್ನೆಯಲ್ಲಿ ಪ್ರಶ್ನಿಸಿದ್ದಾರೆ. ಅಪಘಾತ ಎಸಗಿದ ಕಾರು ಮುಂದೆ ಹೋಗಿ ಕಲ್ಲಡ್ಕ ಸಮೀಪದ ಕರಿಂಗಾಣ ಕ್ರಾಸ್ ಬಳಿ ಕಾರನ್ನು ಅಡ್ಡವಾಗಿ ಇರಿಸಿ ಮಂಜುನಾಥ್ ಹಾಗೂ ಅವರ ಪತ್ನಿ ಪೂರ್ಣಿಮಾ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಮಂಜುನಾಥ್ ಅವರ ಕಣ್ಣಿನ ಮೇಲೆ ಪೆಟ್ಟು ಬಿದ್ದಿದ್ದು, ಇದೇ ಸಂದರ್ಭ ಪೂರ್ಣಿಮಾ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಸಂಚಾರ ಪೋಲೀಸರು ಭೇಟಿ ನೀಡಿ ವಾಹನ ಹಾಗೂ ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.