Visitors have accessed this post 583 times.
ಉಪ್ಪಿನಂಗಡಿ: ಬಾಲಕನೋರ್ವ ಮನೆಯ ಕಿಟಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕ ಇಲ್ಲಿನ ಖಾಸಗಿ ಶಾಲೆಯ ಮುಂದಿನ ಅವಧಿಯಲ್ಲಿ 8 ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಮನೆ ನಿವಾಸಿ ನಂದನ್ (13) ಎಂದು ಗುರುತಿಸಲಾಗಿದೆ. ಪಂಜದ ದಿವಂಗತ ರೋಹಿತ್ ಗೌಡ ಎಂಬವ ರ ಮಗನಾಗಿದ್ದ ಈತ ತನ್ನ ತಂದೆಯ ನಿಧನದ ನಂತರ ದುಗಲಾಡಿಯ ತನ್ನ ಮಾವನ ಮನೆಯಲ್ಲಿದ್ದು ಉಪ್ಪಿನಂಗಡಿಯ ಖಾಸಗಿ ಶಾಲೆಯಲ್ಲಿ ಕಲಿಯುತ್ತಿದ್ದ. ಈತ ಏಳನೇ ತರಗತಿ ಉತ್ತೀರ್ಣನಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ 8 ನೇ ತರಗತಿಗೆ ತೇರ್ಗಡೆ ಹೊಂದಿದ್ದ. ಶುಕ್ರವಾರದಂದು ತನ್ನ ನಾಲ್ವರು ಗೆಳೆಯರೊಂದಿಗೆ ಆಟವಾಡುತ್ತಿದ್ದ ಈತ ತನ್ನ ಕೆಟ್ಟು ಹೋಗಿದ್ದ ಸೈಕಲ್ ಅನ್ನು ರಿಪೇರಿ ಮಾಡಿಕೊಡಬೇಕೆಂದು ಮನೆಯಲ್ಲಿ ಒತ್ತಾಯಿಸಿದ್ದ. ಮನೆಯ ಇಕ್ವಾರ್ಟರ್ ರಿಪೇರಿಗೆ ಬಂದಿರುವುದರಿಂದ ಇವತ್ತು ಬೇಡ ನಾಳೆ ಸೈಕಲ್ ರಿಪೇರಿ ಮಾಡಿಕೊಡಲಾಗುವುದೆಂದು ಮನೆಯವರು ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಆತ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿಕೊಂಡು ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.