
ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಗನಿಗೆ ಟಿಕೆಟ್ ಕೈತಪ್ಪಿದ ನಂತರ ಬಂಡೆದ್ದಿರುವ ಕೆಎಸ್ ಈಶ್ವರಪ್ಪ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.



ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು ಬಿಜೆಪಿಗೆ ಮುಜುಗರ ತಂದಿತ್ತು. ಈಶ್ವರಪ್ಪ ಮನವೊಲಿಸಲು ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಲವು ನಾಯಕರು ಪ್ರಯತ್ನ ಮಾಡಿದ್ದರು. ಆದರೆ ಯಾವುದಕ್ಕೂ ಬಗ್ಗದ ಈಶ್ವರಪ್ಪ ಸ್ಪರ್ಧೆ ಮಾಡಿದ್ದಾರೆ.
ತಮ್ಮ ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಭಾವಚಿತ್ರ ಬಳಸುವ ಮೂಲಕ ಬಿಜೆಪಿಗೆ ಮತ್ತಷ್ಟು ತಲೆನೋವು ತಂದಿದ್ದರು. ಈಗ ಅವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಿ ಆದೇಶ ನೀಡಲಾಗಿದೆ.
ಚಿಹ್ನೆ ಪಡೆದುಕೊಂಡ ಈಶ್ವರಪ್ಪ
ಸೋಮವಾರ ಸಂಜೆ ನಾಮಪತ್ರ ಹಿಂಪಡೆಯಲು ಚುನಾವಣಾ ಆಯೋಗದ ಗಡುವು ಮುಗಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರ ಹೊರಬಿದ್ದಿದೆ. ಈಶ್ವರಪ್ಪ ಅವರಿಗೆ ಕಬ್ಬಿನ ಮುಂದೆ ನಿಂತಿರುವ ರೈತನ ಚಿಹ್ನೆಯನ್ನು ನೀಡಲಾಗಿದೆ. ಶಿವಮೊಗ್ಗದಲ್ಲಿ ಮೇ 7 ರಂದು ಲೋಕಸಭಾ ಚುನಾವಣೆಯ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.
ಹಾವೇರಿ ಕ್ಷೇತ್ರದಲ್ಲಿ ತಮ್ಮ ಪುತ್ರ ಕೆ.ಇ.ಕಾಂತೇಶ್‌ಗೆ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಬಿಜೆಪಿ ಹಾಗೂ ಈಶ್ವರಪ್ಪ ನಡುವೆ ಸಮರ ಶುರುವಾಗಿತ್ತು. ಬಿಎಸ್‌ವೈ ಮತ್ತು ಕುಟುಂಬದ ವಿರುದ್ಧ ಈಶ್ವರಪ್ಪ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.