ಬಂಟ್ವಾಳ : ಈ ಮಣ್ಣಿನ ಸಂಸ್ಕೃತಿ, ಮೌಲ್ಯವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ಸಂಘ ಸಂಸ್ಥೆಗಳ ಮೇಲಿದೆ, ಈ ನಿಟ್ಟಿನಲ್ಲಿ ನವೋದಯ ಮಿತ್ರ ಕಲಾ ವೃಂದವು ಸಮಾಜಕ್ಕೆ ಪೂರಕವಾಗಿ ಸಮಾಜಮುಖಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಅವರು ಎ.13ರಂದು ಶನಿವಾರ ನೆತ್ತರಕೆರೆ ಶಾಲಾ ಮೈದಾನದಲ್ಲಿ ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ (ರಿ) ಮತ್ತು ನೇತ್ರಾವತಿ ಮಾತೃ ಮಂಡಳಿ ಇದರ 37ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ವೈದ್ಯೆ ಡಾ. ವೀಣಾ ತೋಳ್ಪಾಡಿ ಮಾತನಾಡಿ, ದಾವಂತದ ಬದುಕಿನಲ್ಲಿ ಮನುಷ್ಯನಿಗೆ ಎಲ್ಲಾ ಅನುಕೂಲತೆಗಳಿದ್ದರೂ ಭಾವನಾತ್ಮಕ ಸಂಬಂಧಗಳು ಕಡಿಮೆಯಾಗಿದೆ,ಮಕ್ಕಳಿಗೆ ಮನೆಯಲ್ಲಿಯೇ ಹೆತ್ತವರ ಮೂಲಕ ಸಂಸ್ಕಾರ ಕಲಿಸುವ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಸೆಲ್ವಿಯಾ ಬ್ರಗ್ಸ್, ನವೋದಯ ಮಿತ್ರ ಕಲಾ ವೃಂದದ ಗೌರವಧ್ಯಕ್ಷ ಪಿ ಸುಬ್ರಮಣ್ಯ ರಾವ್, ವಾರ್ಷಿಕೋತ್ಸವದ ಸಮಿತಿಯ ಅಧ್ಯಕ್ಷ ಶೇಖರ್ ಕೊಡಿ, ನೇತ್ರಾವತಿ ಮಾತೃ ಮಂಡಳಿಯ ಸಂಚಾಲಕಿ ಲಲಿತ ಸುಂದರ, ಅಧ್ಯಕ್ಷೆ ಮಾಲತಿ ಚಂದ್ರಹಾಸ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ನೆತ್ತರಕೆರೆ ಅಂಗನವಾಡಿಯಲ್ಲಿ 33ವರ್ಷ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಶಿಕ್ಷಕಿ ಶಶಿಕಲಾ ದಯಾನಂದ ಹಾಗೂ ಬಾಲಗೋಕುಲದ ಮಾತಾಜಿ ಮಮತಾರನ್ನು ಗೌರವಿಸಿ ಸನ್ಮಾನಿಸಲಾಯಿತು.
ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯದಿಕ ಅಂಕದೊಂದಿಗೆ ತೇರ್ಗಡೆ ಹೊಂದಿದ ಮೂರು ವಿದ್ಯಾರ್ಥಿಗಳಿಗೆ ಕೀರ್ತಿಶೇಷ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಹೆಸರಲ್ಲಿ ಕೊಡಮಾಡುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಂಘದ ಸಂಚಾಲಕ ದಾಮೋದರ ನೆತ್ತರಕೆರೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಸಂತೋಷ್ ಕುಮಾರ್ ನೆತ್ತರಕೆರೆ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಧರ್ ಹೆಚ್ ವರದಿ ವಾಚಿಸಿದರು,ಕು ಶ್ರಾವ್ಯ ಬಹುಮಾನಿತರ ಪಟ್ಟಿ ಓದಿದರು, ಜಯಂತಿ ವಿಶ್ವನಾಥ್ ಹಾಗೂ ಗೌತಮಿ ಸನ್ಮಾನಿತರ ಪರಿಚಯ ವಾಚಿಸಿದರು. ಕೋಶಾಧಿಕಾರಿ ಲೋಕೇಶ್ ಎನ್ ಧನ್ಯವಾದವಿತ್ತರು. ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.
ಬೆಳ್ಳಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಮದ್ಯಾನ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ಜರುಗಿತು, ಸಂಜೆ ಶಾಲಾ ಮಕ್ಕಳ ನೃತ್ಯ ಸಂಭ್ರಮ ಹಾಗೂ ಸಂಘದ ಹಾಗೂ ಮಾತೃ ಮಂಡಳಿಯ ಸದಸ್ಯರಿಂದ ಸಾಂಸ್ಕೃತಿಕ ವೈವಿದ್ಯ ಕಾರ್ಯಕ್ರಮದ ಬಳಿಕ ನಮ್ಮ ಕಲಾವಿದರು ಬೆದ್ರ ಇವರಿಂದ “ಕುಸಲ್ದ ಗೊಬ್ಬು”ಎಂಬ ನಾಟಕ ಪ್ರದರ್ಶನಗೊಂಡು ಜನ ಮೆಚ್ಚುಗೆ ಪಡೆಯಿತು.