
ನೆಲ್ಯಾಡಿ: ತಾಳಿ ಕಟ್ಟಿಸಿಕೊಳ್ಳಲು ವಧು ನಿರಾಕರಿಸಿದ ಹಿನ್ನೆಲೆಯಲ್ಲಿ ಮಂಟಪದಲ್ಲೇ ಮದುವೆ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.



ಕೊಣಾಲು ಗ್ರಾಮದ ಕೋಲ್ಪೆ ದಿ. ಬಾಬು ಗೌಡರ ಪುತ್ರ ಉಮೇಶ ಅವರ ವಿವಾಹವು ಬಂಟ್ವಾಳ ತಾಲೂಕು ಕುಳ ಗ್ರಾಮದ ಕಂಟ್ರಮಜಲು ದಿ. ಕೊರಗಪ್ಪ ಗೌಡರವರ ಪುತ್ರಿ ಸರಸ್ವತಿ ಅವರೊಂದಿಗೆ ನಿಗದಿಯಾಗಿತ್ತು. ಬೆಳಗ್ಗೆ 11.35ರ ಮುಹೂರ್ತದಲ್ಲಿ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ವಿವಾಹ ನಡೆದು ಮಧ್ಯಾಹ್ನ 1 ಗಂಟೆಗೆ ಕೊಲ್ಪೆಯ ವರನ ಮನೆಯಲ್ಲಿ ಸತ್ಕಾರ ಕೂಟ ನಿಗದಿಯಾಗಿತ್ತು. ಅದರಂತೆ ವರ ಹಾಗೂ ವಧುವಿನ ಕಡೆಯವರು ದೇವಸ್ಥಾನಕ್ಕೆ ಮದುವೆ ದಿಬ್ಬಣದಲ್ಲಿ ಬಂದಿದ್ದರು.ಧಾರೆಯ ಸೀರೆ ಹಾಗೂ ಶೃಂಗಾರದೊಂದಿಗೆ ಮದುವೆ ಮಂಟಪಕ್ಕೆ ಬಂದಿದ್ದ ವಧು ಸರಸ್ವತಿ ಹಾಗೂ ವರ ಉಮೇಶ ಪರಸ್ಪರ ಹೂಮಾಲೆ ಹಾಕಿಸಿಕೊಂಡಿದ್ದರು. ಇನ್ನು ವರ ಉಮೇಶ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ವಧು ಸರಸ್ವತಿ ಈ ಮದುವೆ ನನಗೆ ಇಷ್ಟ ಇಲ್ಲಎಂದು ಹೇಳಿ ತಾಳಿ ಕಟ್ಟಲು ಅವಕಾಶ ನೀಡಲಿಲ್ಲ ಎಂದು ವರದಿಯಾಗಿದೆ. ಇದರಿಂದ ಎರಡೂ ಕಡೆಯವರೂ ವಿಚಲಿತಗೊಂಡು ವಧುವಿನ ಮನವೊಲಿಕೆಗೆ ಮುಂದಾದರೂ ವಧು ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿರುವುದರಿಂದ ಬಳಿಕ ಎರಡೂ ಕಡೆಯವರೂ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದರು.
ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆ ವೇಳೆ ವಧು ಸರಸ್ವತಿ ಆಗಿರುವ ಅಚಾತುರ್ಯಕ್ಕೆ ಪಶ್ಚಾತಾಪ ಪಟ್ಟು ಉಮೇಶ ಅವರನ್ನು ಮದುವೆ ಆಗಲು ಒಪ್ಪಿಗೆ ಸೂಚಿಸಿದರೂ ಉಮೇಶ್ ಅವರು ನಿರಾಕರಿಸಿದರೆಂದು ಹೇಳಲಾಗಿದೆ. ಇದರಿಂದಾಗಿ ಎರಡೂ ಕಡೆಯವರು ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು ಎಂದು ಗೊತ್ತಾಗಿದೆ.
ವರ ಉಮೇಶ್ ಅವರ ಮನೆಯಲ್ಲಿ ಮದುವೆ ಔತಣ ಕೂಟಕ್ಕೆ ಮಾಂಸಾಹಾರಿ ಊಟಕ್ಕೆ ಸಿದ್ಧತೆ ಮಾಡಲಾಗಿತ್ತು. ಸುಮಾರು 500 ಮಂದಿಗೆ ಊಟಕ್ಕೆ ಸಿದ್ಧತೆ ಮಾಡಲಾಗಿತ್ತು. 1 ಸಾವಿರದಷ್ಟು ಐಸ್ ಕ್ರೀಮ್ ಸಹ ತರಿಸಲಾಗಿತ್ತು. ಮದುವೆ ಮುರಿದು ಬಿದ್ದಿರುವುದರಿಂದ ಇವೆಲ್ಲವೂ ಹಾಗೇ ಉಳಿದಿದೆ. ಕೊನೆ ಕ್ಷಣದಲ್ಲಿ ಯುವತಿ ಮದುವೆ ನಿರಾಕರಿಸಿದರಿಂದ ಎರಡೂ ಕಡೆಯವರಿಗೂ ಲಕ್ಷಾಂತರ ರೂಪಾಯಿ ನಷ್ಟ ಆಗಿದೆ.