ಮುಂಬೈ: ಮಹಾರಾಷ್ಟ್ರ ಮುಂಬೈ ನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಸರಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ವೈದ್ಯರು ಮೊಬೈಲ್ ಟಾರ್ಚ್ ಲೈಟ್ ಬಳಸಿ ಗರ್ಭಿಣಿಗೆ ಹೆರಿಗೆ ಮಾಡಲು ಮುಂದಾಗಿ ಬಳಿಕ ತಾಯಿ ಮಗು ಮೃತಪಟ್ಟ ಘಟನೆ ಮುಂಬೈ ಮಹಾನಗರ ಪಾಲಿಕೆ ನಡೆಸುತ್ತಿರುವ ಸುಷ್ಮಾ ಸ್ವರಾಜ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಮೃತ ಮಹಿಳೆಯ ಪತಿ ಖುಸ್ರುದ್ದೀನ್ ಅನ್ಸಾರಿ ಅವರು ಸ್ವತಃ ಅಂಗವಿಕಲರಾಗಿದ್ದಾರೆ, ಅವರ 26 ವರ್ಷದ ಪತ್ನಿ ಶಾಹಿದುನ್ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಈ ವೇಳೆ ಆಸ್ಪತ್ರೆಗೆ ದಾಖಲಿಸಿದ ವೈದ್ಯರು ಸಾಮಾನ್ಯ ಹೆರಿಗೆ ಮಾಡಿಸುವ ಭರವಸೆ ನೀಡಿದ್ದರು ಆದರೆ ಸೋಮವಾರ ಶಾಹಿದುನ್ ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು ಈ ವೇಳೆ ಸಾಮಾನ್ಯ ಹೆರಿಗೆ ಕಷ್ಟ ಎಂದುಕೊಂಡ ವೈದ್ಯರು ಆಪರೇಷನ್ ಮೂಲಕ ಹೆರಿಗೆ ಮಾಡಲು ಮುಂದಾಗಿದ್ದಾರೆ ದುರದೃಷ್ಟವಶಾತ್ ಈ ವೇಳೆ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಅಲ್ಲದೆ ಆಸ್ಪತ್ರೆಯಲ್ಲಿದ್ದ ಜನರೇಟರ್ ಕೂಡ ಕಾರ್ಯನಿರ್ವಹಿಸಲಿಲ್ಲ. ಬಳಿಕ ವೈದ್ಯರು ಮೊಬೈಲ್ ಟಾರ್ಚ್ ಬೆಳಕಲ್ಲಿ ಹೆರಿಗೆ ಮಾಡಲು ಮುಂದಾಗಿದ್ದಾರೆ ಈ ವೇಳೆ ತಾಯಿ ಮತ್ತು ಹೊಟ್ಟೆಯಲ್ಲಿದ್ದ ಮಗು ಇಬ್ಬರೂ ಕೊನೆಯುಸಿರೆಳೆದಿದ್ದಾರೆ.
ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕುಟುಂಬ ಸದಸ್ಯರು ಆಸ್ಪತ್ರೆಯ ನಿರ್ಲಕ್ಷದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ ಅಲ್ಲದೆ ತುರ್ತು ಸೇವಾ ಘಟಕದಲ್ಲಿ ಆಮ್ಲಜನಕದ ಕೊರತೆ ಇತ್ತು ಇದರಿಂದಲೇ ಪತ್ನಿ ಮೃತಪಟ್ಟಿರುವುದಾಗಿ ಮಹಿಳೆಯ ಪತಿ ಆರೋಪಿಸಿದ್ದಾರೆ.
ತಾಯಿ ಮತ್ತು ಮಗುವಿನ ಸಾವಿನ ನಂತರ ಆಸ್ಪತ್ರೆಯ ಅದೇ ಆಪರೇಷನ್ ಥಿಯೇಟರ್‌ನಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮತ್ತೊಂದು ಹೆರಿಗೆ ನಡೆಸಲಾಯಿತು ಎಂದು ಕುಟುಂಬದವರು ಹೇಳಿದ್ದಾರೆ.
ಘಟನೆ ಸಂಬಂಧ ಮಹಾನಗರ ಪಾಲಿಕೆ ತನಿಖೆಗೆ ಮುಂದಾಗಿದ್ದು ಪೂರ್ಣ ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.