ಪುಣೆ: ಮಹಾರಾಷ್ಟ್ರದ ಪುಣೆ ಬಳಿ ನಿಸರ್ಗ ಸ್ವರ್ಗ ಅಂತ ಕರೆಯುವ ಲೋನಾವಾಲಾ ಜಲಪಾತ ಸಮೀಪ ಘೋರ ದುರಂತವೊಂದು ಸಂಭವಿಸಿದೆ.
ಪುಣೆಯ ವನ್ವಾಡಿ ಸಯ್ಯದ್ ನಗರದ ನಿವಾಸಿ ಅನ್ಸಾರಿ ಕುಟುಂಬ ಲೋನಾವಾಲಾ ಫಾಲ್ಸ್ ವೀಕ್ಷಣೆಗೆಂದು ತೆರಳಿತ್ತು. ರವಿವಾರ (ಜೂ.30) ರಂದು ಮಧ್ಯಾಹ್ನ ಭೂಷಿ ಅಣೆಕಟ್ಟಿನ ಸಮೀಪವಿರುವ ಜಲಪಾತದ ಬಳಿ ಆಟವಾಡುತ್ತಿದ್ದರು. ಅದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಜಲಪಾತ ಮಧ್ಯದಲ್ಲಿ ಕುಳಿತ್ತಿದ್ದರು.
ಪುಣೆಯ ಲೋನಾವಾಲಾ ಪ್ರದೇಶದ ಸುತ್ತಮುತ್ತ ಭಾರಿ ಮಳೆಯಾಗಿದೆ. ಇದರಿಂದ ಭೂಷಿ ಡ್ಯಾಂನಿಂದ ಏಕಾಏಕಿ ಹೆಚ್ಚಿನ ನೀರು ಧುಮ್ಮಿಕ್ಕುತ್ತಾ ಹರಿದು ಬಂದಿದೆ. ಅಷ್ಟೋತ್ತಿಗೆ 9 ಮಂದಿ ಪೈಕಿ ನಾಲ್ವರು ದಡ ಸೇರಿದ್ದರು. ಆದರೆ, ಜಲಪಾತದ ಮಧ್ಯದಲ್ಲಿದ್ದ ಐವರು ದಡಕ್ಕೆ ಬರಲಾಗದೆ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಎಲ್ಲರ ಕಣ್ಣೆದುರೇ ಕೊಚ್ಚಿ ಹೋಗಿದ್ದು, ದಡದಲ್ಲಿದ್ದ ಹೆತ್ತವರು ರಕ್ಷಿಸಿ ರಕ್ಷಿಸಿ ಎಂದು ಚೀರಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಜಲಪಾತದಲ್ಲಿ ಕೊಚ್ಚಿಹೋದ ಶಾಹಿಸ್ತಾ ಅನ್ಸಾರಿ, ಅಮಿಮಾ ಅನ್ಸಾರಿ ಮತ್ತು ಉಮೇರಾ ಅನ್ಸಾರಿ ಈ ಮೂವರ ಮೃತದೇಹಗಳು ಸಿಕ್ಕಿವೆ. ಇನ್ನೂ 9 ವರ್ಷದ ಮರಿಯಾ ಸೈಯದ್ ಹಾಗೂ 4 ವರ್ಷದ ಅದ್ನಾನ್ ಅನ್ಸಾರಿ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.
ಆದರೆ ಈಗ ಈ ಕುಟುಂಬ ನೀರಿನಲ್ಲಿ ಹೋಗುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.