ಉಳ್ಳಾಲ: ಶೋಕಿ ಜೀವನಕ್ಕಾಗಿ ಮನೆಯ ಕಪಾಟಿನಲ್ಲಿದ್ದ ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನ ಮನೆ ಮಕ್ಕಳೇ ಎಗರಿಸಿರುವ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿ ಐದು ಮಂದಿಯನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆದರೆ, ಈ ಬಗ್ಗೆ ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಮಾತ್ರ ಮಾಧ್ಯಮಗಳಿಗೆ ಮಾಹಿತಿ ಕೊಡದೆ ಮುಚ್ಚಿಟ್ಟಿದ್ದಾರೆ. ಜೂನ್ 8ರ ಬೆಳಗ್ಗೆ 8 ಗಂಟೆಯಿಂದ 16ರ ಮಧ್ಯಾಹ್ನ 12 ಗಂಟೆಯ ನಡುವೆ ಚಿನ್ನಾಭರಣ ಕಳವಾಗಿರುವ ಬಗ್ಗೆ ಉಳ್ಳಾಲ ಠಾಣೆಗೆ ಉಳ್ಳಾಲ ಬೈಲಿನ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಮನೆಯ ಬೆಡ್ ರೂಮಿನ ಕಪಾಟಿನಲ್ಲಿರಿಸಿದ್ದ ಸ್ವೀಲಿನ ಡಬ್ಬದಲ್ಲಿ ಇಟ್ಟಿದ್ದ ಚಿನ್ನದ ಕರಿಮಣಿ ಸರ, ನೆಕ್ಲಸ್, ಚೈನ್, ಬ್ರಾಸ್ ಲೈಟ್, ಉಂಗುರಗಳು, ಕಿವಿ ಓಲೆಗಳು, ಕೈಬಳೆಗಳು ಸೇರಿದಂತೆ ಅಂದಾಜು 15 ಲಕ್ಷಕ್ಕೂ ಹೆಚ್ಚು ಮೌಲ್ಯದ 32 ಪವನ್ ಗಿಂತಲೂ ಹೆಚ್ಚು ತೂಕದ ಚಿನ್ನದ ಆಭರಣಗಳನ್ನ ಕಳವುಗೈದ ಬಗ್ಗೆ ದೂರಿನಲ್ಲಿ ತಿಳಿಸಿದ್ದರು. ಪ್ರಕರಣದ ಜಾಡು ಹಿಡಿದ ಉಳ್ಳಾಲ ಪೊಲೀಸರಿಗೆ ತನಿಖೆಯ ವೇಳೆ ದೂರುದಾರರ ಪಿಯುಸಿ ಓದುತ್ತಿರುವ ಅಪ್ರಾಪ್ತ ಮಗನೇ ಕಳ್ಳತನದ ರೂವಾರಿ ಎಂದು ತಿಳಿದುಬಂದಿತ್ತು. ನೆರೆಮನೆಯ ಮತ್ತೋರ್ವ ಅಪ್ರಾಪ್ತ ಸೇರಿ ಇವರ ಸ್ನೇಹಿತರಾದ ಹೊರಗಿನ ಮೂವರು ಯುವಕರು ಕಳ್ಳತನದಲ್ಲಿ ಭಾಗಿಯಾಗಿದ್ದು ಉಳ್ಳಾಲ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾರೆ. ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ಬಗ್ಗೆ ಮಾಹಿತಿ ಇದೆ. ಅಪ್ರಾಪ್ತ ಆರೋಪಿಗಳಿಬ್ಬರಿಗೆ ಜಾಮೀನು ಸಿಕ್ಕಿರುವುದಾಗಿಯೂ ತಿಳಿದು ಬಂದಿದೆ. ಪೋಷಕರು ಮೊಬೈಲ್ ನೀಡದೆ ಕಟ್ಟುನಿಟ್ಟು ಮಾಡಿದ್ದಕ್ಕೆ ಮನೆ ಮಗನೇ ಸ್ನೇಹಿತರೊಂದಿಗೆ ಸೇರಿ ಕಳವು ಕೃತ್ಯ ಎಸಗಿದ್ದಾನೆ. ಮನೆಯಿಂದ ಕದ್ದ ಚಿನ್ನಾಭರಣಗಳಲ್ಲಿ ಸುಮಾರು ಆರು ಲಕ್ಷದಷ್ಟು ಮೌಲ್ಯದ ಚಿನ್ನವನ್ನ ಮಾರಾಟ ಮಾಡಿದ್ದು ಹುಡುಗರು ತಮಗಾಗಿ ಐಫೋನ್ ಗಳನ್ನು ಖರೀದಿಸಿದ್ದರು. ಕಳೆದ ಶುಕ್ರವಾರ ಪ್ರಮುಖ ಅಪ್ರಾಪ್ತ ಆರೋಪಿ ಮತ್ತು ಇತರರ ಬಂಧನವಾಗುತ್ತಿದ್ದಂತೆಯೇ ಅವರ ಪೋಷಕರು ಮರ್ಯಾದೆಗೆ ಅಂಜಿ ಪ್ರಕರಣ ದಾಖಲಿಸದಂತೆ ಠಾಣೆಯಲ್ಲೇ ಬಿಡಾರ ಹೂಡಿದ್ದರೆಂದು ತಿಳಿದುಬಂದಿದೆ. ಆರೋಪಿಗಳ ಬಂಧನ ನಡೆದು ವಾರ ಕಳೆದರೂ ಮಾಧ್ಯಮದವರು ಕೇಳಿದರೆ ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರು ಮಾಹಿತಿ ನೀಡದೇ ಮುಚ್ಚಿಟ್ಟಿದ್ದು ಭಾರೀ ಅನುಮಾನಕ್ಕೆ ಕಾರಣವಾಗಿದೆ.