
ಮಂಗಳೂರು: ನಗರದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಮನೆಗಳವು ಹಾಗೂ ಪಂಪ್‌ವೆಲ್ ಕಪಿತಾನಿಯೋ ಬಳಿಯ ಅಂಗಡಿಗಳವು ಪ್ರಕರಣವನ್ನು ಬೇಧಿಸಿದ ಮಂಗಳೂರು ಪೊಲೀಸರು ನಾಲ್ವರನ್ನು ಬಂಧಿಸಿ 10ಲಕ್ಷ ನಗದು ಸೇರಿದಂತೆ 12.50ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಜೇಶ್ವರದ ಮಹಮ್ಮದ್ ಸಿಯಾಬ್, ಬಜ್ಪೆಯ ಮಹಮ್ಮದ್ ಅರ್ಫಾಝ್, ಸಫ್ವಾನ್ ಹಾಗೂ ಉತ್ತರಪ್ರದೇಶ ಮೂಲದ ಮಹಮ್ಮದ್ ನಜೀರ್ ಹೌಸಿಲ್ ಖಾನ್ ಮತ್ತು ಇಲಿಯಾಸ್ ಖಾನ್ ಬಂಧಿತ ಆರೋಪಿಗಳು. ಕಳೆದ 2-3 ತಿಂಗಳಿನಿಂದ ಕೊಣಾಜೆ ಠಾಣಾ ವ್ಯಾಪ್ತಿಯಲ್ಲ 3ಮನೆಗಳಲ್ಲಿ ಕಳವು ನಡೆದಿತ್ತು. ಪ್ರಕರಣದಲ್ಲಿ 9,25,000 ಲಕ್ಷ ಮೌಲ್ಯದ ಸೊತ್ತು ಕಳವಾಗಿತ್ತು. ಜುಲೈ 10ರಂದು ಮುದುಂಗಾರಕಟ್ಟೆ, ಚೆಕ್ ಪಾಯಿಂಟ್ ಬಳಿ ಬಂದ ಕಾರನ್ನು ಪೊಲೀಸರು ತಪಾಸಣೆ ನಡೆಸಿದಾಗ ಕಾರ್‌ನಲ್ಲಿ ಮಾರಕಾಯುಧ, ಮಂಕಿಕ್ಯಾಪ್, ಹ್ಯಾಂಡ್‌ಗ್ಲೌಸ್ ಪತ್ತೆಯಾಗಿದೆ. ತಕ್ಷಣ ಅದನ್ನು ವಶಪಡಿಸಿ, ಕಾರಿನಲ್ಲಿದ್ದ ಮೂವರನ್ನು ಬಂಧಿಸಲಾಗಿತ್ತು. ಈ ಮೂವರು ಮನೆಗಳವು ನಡೆಸಿದವರೆಂದು ಅವರು ಒಪ್ಪಿದ್ದಾರೆ. ಆರೋಪಿಗಳು ಮಾಹಿತಿಯಂತೆ ಮಹಮ್ಮದ್ ಜಂಶೀರ್ ಎಂಬಾತನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಜುಲೈ 8ರಂದು ರಾತ್ರಿ ಪಂಪ್‌ವೆಲ್ ಕಪಿತಾನಿಯೊದ ದಿನಸಿ ಅಂಗಡಿ ಶೆಟರ್ ಮುರಿದು ಕ್ಯಾಶ್ ಕೌಂಟರ್‌ನಲ್ಲಿದ್ದ 10.20ಲಕ್ಷ ನಗದು ದೋಚಲಾಗಿತ್ತು. ಪ್ರಕರಣದ ಬೆನ್ನುಬಿದ್ದ ಪೊಲೀಸರಿಗೆ ರಿಕ್ಷಾ ಡ್ರೈವರ್‌ಗಳಿಂದ ರಾತ್ರಿ ವೇಳೆ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ರೈಲ್ವೇ ನಿಲ್ದಾಣದಲ್ಲಿ ಬಿಟ್ಟಿರುವ ಮಾಹಿತಿ ದೊರಕಿದೆ. ಇಬ್ಬರೂ ಉತ್ತರಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣಿಸಿರುವ ಬಗ್ಗೆ ತಿಳಿದು ಬಂದಿದೆ. ರೈಲು ಮಹಾರಾಷ್ಟ್ರದ ಸತಾರ ದಾಟಿ ಮುಂದೆ ಹೋಗುತ್ತಿತ್ತು. ತಕ್ಷಣ ಪುಣೆ ಪೊಲೀಸರಿಗೆ ಮಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಅದರಂತೆ ಆರೋಪಿಗಳ ಚಹರೆ ಹಾಗೂ ಧರಿಸಿರುವ ಬಟ್ಟೆಗಳ ಆಧಾರದಲ್ಲಿ ಪೊಲೀಸರು ವಶಪಡೆದಿದ್ದರು. ಬಳಿಕ ಕಂಕನಾಡಿ ಪೊಲೀಸರು ಪುಣೆಗೆ ಹೋಗಿ ಆರೋಪಿಗಳನ್ನು ಬಂಧಿಸಿ ಕರೆತಂದಿದ್ದಾರೆ. ಅವರಿಬ್ಬರನ್ನು ವಿಚಾರಣೆ ನಡೆಸಿದಾಗ ತಾವು ಕಳವುಗೈದಿರುವುದು ಒಪ್ಪಿದ್ದಾರೆ. ಅಲ್ಲದೆ ಅವರು ರೈಲ್ವೇ ಪ್ಲ್ಯಾಟ್‌ಫಾರಂನ ಮತ್ತೊಂದೆಡೆ ಹಣದ ಬ್ಯಾಗ್ ಬಚ್ಚಿಟ್ಟಿದ್ದರು. ಆ ಬ್ಯಾಗ್‌ನಲ್ಲಿದ್ದ 10.13 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


