
ಬೆಂಗಳೂರು : ಯಾವುದೇ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳಬೇಡಿ. ನಿಮ್ಮ ಎಲ್ಲಾ ಅಹವಾಲುಗಳನ್ನು ಸ್ವೀಕರಿಸಿ, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆದಿದ್ದ ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರಿಗೆ ಭರವಸೆ ನೀಡಿದರು.



ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಮನೆ ನೀಡುವುದಾಗಿ ಘೋಷಣೆ ಮಾಡಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಶನಿವಾರ ನಡೆದ “ಕಾರ್ಯಕರ್ತರೊಂದಿಗೆ ನಿಮ್ಮ ಸಿಎಂ” (ಅಹವಾಲು ಸ್ವೀಕಾರ) ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾವು ಕಾಂಗ್ರೆಸ್ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಇದ್ದೇವೆ ನಮಗೆ ಮನೆ ಕೊಡಿ ಎಂದು ಜಯಂತಿ, ಅರ್ಚನಾ, ಸುಗಂಧಿ, ಆಶಾ, ಸಂಧ್ಯಾ ಅವರು ಮನವಿ ಸಲ್ಲಿಸಿದಾಗ “ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಾ ಇದ್ದೀರಾ. ನಿಮಗೆ ರಾಜೀವ್ ಗಾಂಧಿ ವಸತಿ ನಿಗಮದ ಅಡಿ ಮನೆ ನೀಡುವಂತೆ ಕ್ರಮ ತೆಗೆದುಕೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶೇ.90 ರಷ್ಟು ನಿಗಮ ಮಂಡಳಿಯ ಅಧ್ಯಕ್ಷರನ್ನು ನೇಮಕಾತಿ ಮಾಡಲಾಗಿದೆ. ಸುಮಾರು 10-15 ಮಂಡಳಿಗಳಿಗೆ ನಾನು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಅವರು ಸೇರಿ ಚರ್ಚೆ ನಡೆಸಿ ನೇಮಕಾತಿ ಮಾಡುತ್ತೇವೆ. ಈಗಾಗಲೇ ಜಿಲ್ಲಾ, ತಾಲ್ಲೂಕು ಗ್ಯಾರಂಟಿ ಸಮಿತಿಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಒಂದಷ್ಟು ಮಂಡಳಿಗಳಲ್ಲಿ ನಿರ್ದೇಶಕ ಸ್ಥಾನಕ್ಕೆ ಅವಕಾಶ ಮಾಡಿಕೊಡಲಾಗಿದೆ” ಎಂದು ಹೇಳಿದರು.