
ಬೆಂಗಳೂರು: ಪತ್ನಿಯ ಡ್ರೆಸ್, ಮೇಕಪ್ ಬಗ್ಗೆ ತಲೆ ಕೆಡಿಸಿಕೊಂಡು ಗಲಾಟೆ ಮಾಡಿಕೊಂಡ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ತೊಣಚಿನಕುಪ್ಪೆ ಗ್ರಾಮದಲ್ಲಿ ನಡೆದಿದೆ. ಅಸ್ಸಾಂ ಮೂಲದ ಗುಲ್ಜರ್ ಹುಸೇನ್ ಚೌದರಿ (28) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡ ವ್ಯಕ್ತಿ. ಹುಸೇನ್ 3 ವರ್ಷಗಳ ಹಿಂದೆಯಷ್ಟೇ ಕುಲ್ಸುಮ್ ಬೇಗಂ ಎಂಬಾಕೆ ಜೊತೆ ಮದುವೆಯಾಗಿದ್ದ. ಸುಖ ಜೀವನ ಸಾಗಿಸುವ ನಿಟ್ಟಿನಲ್ಲಿ ನೆಲಮಂಗಲಕ್ಕೆ ಬಂದು ಖಾಸಗಿ ಟ್ರಾನ್ಸ್ಪೋರ್ಟ್ ಕಂಪನಿ ಒಂದರಲ್ಲಿ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಆದರೆ ಇತ್ತೀಚೆಗಷ್ಟೆ ಪತ್ನಿ ಡ್ರೆಸ್, ಮೇಕಪ್, ಬ್ಯುಸಿ ಫೋನ್ ಕಾಲ್ ಬಗ್ಗೆ ಹುಸೇನ್ ತಲೆ ಕೆಡಿಸಿಕೊಂಡಿದ್ದ. ಇದೇ ವಿಚಾರಕ್ಕೆ ಪತ್ನಿ ಜೊತೆ ಗಲಾಟೆ ಮಾಡಿಕೊಂಡಿದ್ದ. ಆದರೆ ಇದೀಗ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


