ಬೆಂಗಳೂರು: ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ಜಾಮೀನು ನೀಡಿತ್ತು. ಈ ಬೆನ್ನಲ್ಲೇ ಇಂದು ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರು ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.
ನಿನ್ನೆ ಈ ಅರ್ಜಿಯ ವಿಚಾರಣೆ ನಡೆಸಿದ್ದಂತ ಕೋರ್ಟ್, ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನಲೆಯಲ್ಲಿ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಸೂರಜ್ ರೇವಣ್ಣ ಅವರು ಬಿಡುಗಡೆಯಾಗಿದ್ದಾರೆ.
ಹೀಗಿದೆ ಬಿಡುಗಡೆಯ ನಂತ್ರ ಸೂರಜ್ ರೇವಣ್ಣ ಮೊದಲ ರಿಯಾಕ್ಷನ್
ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಿ ತೇಜೋವಧೆ ಮಾಡಿದ್ದಾರೆ. ಜೈಲಿನಿಂದ ಬಿಡುಗಡೆ ಬಳಿಕ ಎಂಎಲ್ಸಿ ಸೂರಜ್ ರೇವಣ್ಣ ಹೇಳಿಕೆ ನೀಡಿದ್ದು, ತೇಜೋವಧೆ ಮಾಡುವ ದುರುದ್ದೇಶದಿಂದ ಕೇಸ್ ದಾಖಲಿಸಿದ್ದಾರೆ. ನಾವು ಯಾವುದಕ್ಕೂ ಹೆದರಿಕೊಂಡು ಎಲ್ಲಿಗೂ ಓಡಿ ಹೋಗಲ್ಲ.ಎರಡು ಮೂರು ದಿನದಲ್ಲಿ ಎಲ್ಲದಕ್ಕೂ ಸ್ಪಷ್ಟನೆ ಕೊಡುತ್ತೇನೆ. ತನಿಖಾಧಿಕಾರಿಗಳಿಗೆ ಸಹಕಾರ ನೀಡಿದ್ದೇನೆ. ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದರು.
ಇದು ಕೇಸ್ ಅಲ್ಲ ಷಡ್ಯಂತರ ಹಾಗೂ ಕುತಂತ್ರ. ಶಿವಕುಮಾರ್ ಆಪ್ತ ಸಹಾಯಕನಲ್ಲ ಕಾರು ಚಾಲಕನು ಅಲ್ಲ. ನಮಗೆ ಲೋಕೇಶ್ ಅಂತ ಒಬ್ಬನೇ ಕಾರು ಚಾಲಕ ಇದ್ದಾನೆ. ಹಾಸನದಲ್ಲಿ ರೇವಣ್ಣರಿಗಾಗಲಿ ನಮಗಾಗಲಿ ಕಪ್ಪು ಚುಕ್ಕೆ ಇಲ್ಲ. ರಾಜಕೀಯವಾಗಿ ನಮ್ಮನ್ನು ಕುಗ್ಗಿಸುವ ಷಡ್ಯಂತರ ಎಂದು ಪರಪ್ಪನ ಅಗ್ರಹಾರ ಜೈಲಿನ ಬಳಿ ಸೂರಜ್ ರೇವಣ್ಣ ಹೇಳಿಕೆ ನೀಡಿದರು.