
ಮಂಗಳೂರು: ಮದ್ಯದ ನಶೆಯಲ್ಲಿ ಮೋರಿಗೆ ಬಿದ್ದ ಕುಡುಕನೋರ್ವನನ್ನು ಸಂಚಾರಿ ಪೊಲೀಸರು ಮೇಲಕ್ಕೆತ್ತಿ ರಕ್ಷಣೆ ಮಾಡಿ ಘಟನೆ ಮಂಗಳೂರಿನ ಪಂಪ್‌ವೆಲ್ ಬಳಿ ನಡೆದಿದೆ. ಆರೇಳು ಅಡಿ ಆಳವಿದ್ದ ಮೋರಿಗೆ ವ್ಯಕ್ತಿ ಕುಡಿದು ಬಿದ್ದಿದ್ದಾನೆ. ಮಳೆಯಿಂದಾಗಿ ಮೋರಿಯಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ಸ್ವಲ್ಪ ಹೆಚ್ಚು ಕಮ್ಮಿ ಆದರೂ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಇದನ್ನು ಗಮನಿಸಿದ ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಮಂಗಳೂರು ನಗರ ಜೆಪ್ಪಿನಮೊಗರು ಸಂಚಾರಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ವಿಲ್ಸನ್ ಫೆರ್ನಾಂಡಿಸ್ ಅವರು ಮೋರಿಗೆ ಇಳಿದು ವ್ಯಕ್ತಿಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪೊಲೀಸರಿಗೆ ಸಾರ್ವಜನಿಕರು ಕೂಡ ಸಹಕರಿಸಿದ್ದಾರೆ.


