
ಮಂಗಳೂರು: ರಸ್ತೆ ಬಂದ್ ಮಾಡಿದರೆ ಜನರಿಗೆ ಸಮಸ್ಯೆ ಆಗುತ್ತದೆ. ಶಿರಾಡಿ, ಚಾರ್ಮಾಡಿ ವಿಚಾರದಲ್ಲಿ ಸಮಸ್ಯೆಯಿದ್ದರೆ ಮಾತ್ರ ಬಂದ್ ಮಾಡಲಿ. ರಸ್ತೆ ಮಾಡುವಾಗ ಗುಡ್ಡ ಕಡಿಯಬೇಕು, ಸಮಸ್ಯೆ ಮೊದಲೇ ಪರಿಹಾರ ಮಾಡಬೇಕು. ಇಲ್ಲದೇ ಇದ್ದರೆ ಈ ರೀತಿ ರಸ್ತೆ ಮಳೆಗಾಲದಲ್ಲಿ ಗುಡ್ಡ ಕುಸಿತವಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.



ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗುಡ್ಡ ಸ್ವಲ್ಪ ಜರಿದ ತಕ್ಷಣ ಇಡೀ ರಸ್ತೆಯನ್ನು ಬಂದ್ ಮಾಡುವುದಲ್ಲ. ಅಂತಹ ಅಗತ್ಯ ಇದ್ದರೆ ಮಾತ್ರ ರಸ್ತೆ ಬಂದ್ ಮಾಡಲು ಸೂಚಿಸಿದ್ದೇನೆ. ಗುಡ್ಡ ಜರಿದಾಗ ಮಣ್ಣು ತೆರವಿಗೆ ಹತ್ತು ಕಿ.ಮೀಗೊಂದು ತಂಡ ಇಡಬೇಕು. ಅವರು ಮಣ್ಣು ತೆರವು ಮಾಡಿ ಸಂಚಾರ ಅನುವು ಮಾಡಬೇಕು ಎಂದರು.
ದ.ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲಾಧಿಕಾರಿಗಳ ನಡುವೆ ಸಮನ್ವಯತೆ ಇರಬೇಕು. ಹೀಗಾಗಿ ಇವತ್ತು ಅಧಿಕಾರಿಗಳ ತಂಡ ಎಲ್ಲಾ ಜಾಗ ಪರಿಶೀಲನೆ ನಡೆಸಲಿದೆ. ಹೆದ್ದಾರಿ ಅಧಿಕಾರಿಗಳ ಜೊತೆ ಡಿಸಿ ಕೂಡ ಇರುತ್ತಾರೆ, ಮಾಹಿತಿ ಸಂಗ್ರಹಿಸುತ್ತಾರೆ ಎಂದರು.
ಕೆಟ್ಟ ಸಂಪ್ರದಾಯ ಬೇಡ
ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ ಎಂಬ ಬಗ್ಗೆ ಚರ್ಚೆಯಾಗಿತ್ತು. ಆದರೆ ವಿಧಾನಸಭೆ ಕಲಾಪಗಳ ನಿಯಾಮವಳಿ ಪ್ರಕಾರ ನಡೆಯಬೇಕು. ವಾಲ್ಮೀಕಿ ಹಗರಣವು ತನಿಖಾ ಹಂತದಲ್ಲಿದೆ. ಆದರೂ ನಾನು ಅದಕ್ಕೆ ಅವಕಾಶ ಕೊಟ್ಟೆ, ನಾಲ್ಕು ದಿನ ಚರ್ಚೆ ಮಾಡಿದರು. ಕಡೆಯ ಒಂದು ದಿನ ಅವಕಾಶ ಕೊಡಬಾರದು, ಕೊಡಬೇಕು ಎಂಬ ಚರ್ಚೆಯಾಗಿತ್ತು. ಹಾಗಾಗಿಯೇ ನಾನು ಅದರ ವಿಚಾರದಲ್ಲಿ ರೂಲಿಂಗ್ ಕೊಟ್ಟೆ. ಸದ್ಯ ಕಾನೂನಿನಡಿ ತನಿಖೆಯಾಗುತ್ತಿದೆ, ಹೀಗಿರುವಾಗ ವಿಧಾನಸಭೆ ನಿಯಮಾವಳಿಗೆ ಕೆಟ್ಟ ಸಂಪ್ರದಾಯ ಪ್ರಾರಂಭ ಮಾಡಲ್ಲ ಎಂದು ಖಾದರ್ ಹೇಳಿದರು.
ಈಗ ಒಪ್ಪಿಗೆ ಕೊಟ್ಟರೆ ಅದು ಭವಿಷ್ಯದಲ್ಲಿ ಸಮಸ್ಯೆ ಅಗಬಹುದು. ಹೀಗಾಗಿ ಮಾತ್ರ ನಾನು ಆ ವಿಷಯದಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ. ಕೆಟ್ಟ ಸಂಪ್ರದಾಯ ಪ್ರಾರಂಭಿಸಲು ನಾನು ಕಾರಣ ಆಗಲ್ಲ ಎಂದು ಯು.ಟಿ ಖಾದರ್ ಹೇಳಿದರು.