
ಮಂಗಳೂರು: ನಗರದ ಪಡೀಲ್ ಅಳಪೆ ಬಳಿ ನಡೆದ ಹೆಣ್ಣುಮಗು ಅಪಹರಣ ಪ್ರಕರಣವನ್ನು ದೂರು ಬಂದ ಕೇವಲ 2ಗಂಟೆಯೊಳಗೆ ಭೇದಿಸಿದ ಕಂಕನಾಡಿ ನಗರ ಠಾಣಾ ಪೊಲೀಸರು ಕಿಡ್ನ್ಯಾಪರ್‌ನನ್ನು ಬಂಧಿಸಿ ಮಗುವನ್ನು ಮತ್ತೆ ಹೆತ್ತವರ ಮಡಿಲಿಗೊಪ್ಪಿಸಿದ ಘಟನೆ ನಡೆದಿದೆ. ಕೇರಳ ರಾಜ್ಯದ ಎರ್ನಾಕುಲಂ ತಾತಾಪಿಲ್ಲಿ, ಪರವೂರ್, ಜಿಲ್ಲೆಯ ಅನೀಶ್ ಕುಮಾರ್(49) ಬಂಧಿತ ಕಿಡ್ನ್ಯಾಪರ್ ಅಳಪೆ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸಗಾರರ ಎರಡುವರೆ ವರ್ಷದ ಹೆಣ್ಣು ಮಗು ಶನಿವಾರ ಸಂಜೆ 4.30ಗಂಟೆಗೆ ನಾಪತ್ತೆಯಾಗಿತ್ತು.



ಹೆತ್ತವರು ಮಗುವನ್ನು ಹುಡುಕಾಡಿ ಕಾಣದಿದ್ದಾಗ ಸಂಜೆ 7.30ಗಂಟೆಗೆ ಕಂಕನಾಡಿ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಕಂಕನಾಡಿ ನಗರ ಪೊಲೀಸರು ಎಲ್ಲ ಕಡೆ ಮಾಹಿತಿ ನೀಡಿದ್ದಾರೆ. ರೈಲ್ವೆ ಜಂಕ್ಷನ್‌ಗೆ ಭೇಟಿ ನೀಡಿ ಅಲ್ಲಿನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದ್ದಾರೆ. ಆಗ ಓರ್ವ ಮಗುವನ್ನು ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಆತ ಕೇರಳದ ಕಡೆಗೆ ಹೋಗುತ್ತಿದ್ದ ರೈಲಿನಲ್ಲಿ ಮಗುವನ್ನು ಕರೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ ತಕ್ಷಣ ಕಂಕನಾಡಿ ಪೊಲೀಸರು ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಲರ್ಟ್ ಆದ ರೈಲ್ವೇ ಪೊಲೀಸರು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕಿಡ್ನ್ಯಾಪರ್‌ನನ್ನು ಮಗು ಸಹಿತ ವಶಕ್ಕೆ ಪಡೆದ ಕಂಕನಾಡಿ ಪೊಲೀಸರಿಗೆ ರಾತ್ರಿ 9.30ಗಂಟೆಗೆ ಒಪ್ಪಿಸಿದ್ದಾರೆ. ಮಗುವನ್ನು ರಾತ್ರಿಯೇ ಹೆತ್ತವರ ಕೈಗೆ ಒಪ್ಪಿಸಲಾಗಿದೆ. ಕಿಡ್ನ್ಯಾಪರ್ ಅನೀಶ್ ಕುಮಾರ್ ಮನೆಯಲ್ಲಿ ಗಲಾಟೆ ಮಾಡಿ ಮುಂಬೈಯಲ್ಲಿರುವ ತಾಯಿ ಬಳಿ ಹೋಗಿದ್ದ. ಅಲ್ಲಿಂದ ವಾಪಸ್ ಮಂಗಳೂರಿಗೆ ರೈಲಿನಲ್ಲಿ ಬಂದು, ಸಸ್ಯವನ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ. ಈ ವೇಳೆ ರಸ್ತೆಯಲ್ಲಿ ಆಟವಾಡಿಕೊಂಡಿದ್ದ ಹೆಣ್ಣು ಮಗುವನ್ನು ನೋಡಿದ್ದಾನೆ. ತನಗೆ 3 ಗಂಡು ಮಕ್ಕಳಿದ್ದು, ಹೆಣ್ಣು ಮಗುವಿಲ್ಲ. ಆದ್ದರಿಂದ ಹೆಣ್ಣುಮಗು ಬೇಕೆಂದು ಮಗುವನ್ನು ಅಪಹರಣ ಮಾಡಿರುವುದಾಗಿ ಆತ ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಬಂಧಿತ ಅನೀಶ್ ಕುಮಾರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.