
ತುಳುನಾಡ ದೈವರಾಧನೆ ಸಂರಕ್ಷಣಾ ವೇದಿಕೆ (ರಿ) ಮಂಗಳೂರು ಇದರ ವತಿಯಿಂದ ಆಯೋಜಿಸಲಾದ ದೈವರಾಧನೆಗೆ ಒಂಜಿ ದಿನ – ನಂಬಿಕೆ ಒರಿಪಾಗ ಎನ್ನುವ ವಿಶಿಷ್ಟ ಕಾರ್ಯಕ್ರಮ ಮಂಗಳೂರಿನ ಕಾವೂರು ಸಹಕಾರಿ ಸದನದಲ್ಲಿ ದಿನಾಂಕ 01.09.2024 ರಂದು ನಡೆಯಿತು.



ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿಗಳು ಹಾಗೂ ಹಿಂದೂ ಮುಖಂಡರಾದ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಅವರು ಮಾತನಾಡಿ ದೈವಾರಾಧನೆ ಎಂದು ನಂಬಿಕೆಯಾಗಿ ಉಳಿದಿಲ್ಲ ದಂಧೆಯಾಗಿದೆ. ತುಳುನಾಡಿನ ದೈವಗಳ ಹೆಸರಿನಲ್ಲಿ ದಂಧೆ ನಡೆಯುತ್ತಿದೆ. ಯಾವ ಸಮಾಜ ನಂಬಿಕೆ, ಕೌಟುಂಬಿಕ ಪದ್ಧತಿ, ಧಾರ್ಮಿಕ ಸಂಸ್ಕೃತಿ ಯ ಹಿರಿಮೆಯನ್ನು ದೈವರಾಧನೆಯ ಮೂಲಕ ಎತ್ತಿ ಹಿಡಿದಿತ್ತೋ ಇಂದು ಅದೇ ಸಮಾಜದಲ್ಲಿ ದೈವರಾಧನೆಯ ವ್ಯಾಪಾರಿಕರಣದಿಂದ ಹಲವಾರು ಕುಟುಂಬಗಳು ನಾಶವಾಗಿದೆ. ದೈವಾರಾಧನೆ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ಹಿಂದೂ ಸಮಾಜ ಯೋಚಿಸಬೇಕು ಎಂದರು.
ದೈವ ನಂಬಿಕೆಗಳು ಇಂದು ದುಡ್ಡು ಮಾಡುವ ಸಾಧನವಾಗಿದೆ. ದೈವಾರಾಧನೆ ಹೆಸರಿನಲ್ಲಿ ನಡೆಯುತ್ತಿರುವ ದಂಧೆ ನಿಲ್ಲದೆ ಹೋದಲ್ಲಿ ತುಳುನಾಡಿನ ಮೂಲ ನಂಬಿಕೆಗಳು ನಾಶವಾಗಲಿದೆ. ಪೊಸತ್ ತೋಡಡ, ಪರತ್ ನಿಗಿಪಡ ಎಂಬ ದೈವ ನುಡಿಯಂತೆ ನಾವು ಸಾಗಬೇಕಾಗಿದೆ. ದೈವಾರಾಧನೆಯ ಸಾಂಸ್ಕೃತೀಕರಣವನ್ನು ತಡೆಯಬೇಕು. ದೈವಗಳು ನಮ್ಮ ನಂಬಿಕೆಯ ಭಾಗವೇ ಹೊರತು ಮನೋರಂಜನಾ ಚಟುವಟಿಕೆಯಲ್ಲ. ಯಾವುದೇ ಒಂದು ವಸ್ತು ಅತಿಯಾದಲ್ಲಿ ವಿಷವಾಗುತ್ತದೆ. ದೈವದ ಕೊಡಿಯಡಿಯಲ್ಲಿ ಫೋಟೋಗ್ರಫಿ, ವಿಡಿಯೋಗ್ರಫಿ ನಿಷೇಧಿಸಬೇಕು. ಪಡುಬಿದ್ರೆಯ ಬ್ರಹ್ಮ ಸ್ಥಾನದಲ್ಲಿ ಇಂದಿಗೂ ಫೋಟೋ, ವಿಡಿಯೋಗೆ ಅವಕಾಶ ಮಾಡಿಕೊಟ್ಟಿಲ್ಲ, ಏಕೆಂದರೆ ಇದು ಪೂರ್ವಕಾಲದ ಪದ್ಧತಿ. ಇದೇ ರೀತಿಯ ಕಟ್ಟುಕಟ್ಟಲೆ ತುಳುನಾಡಿನ ಎಲ್ಲಾ ದೈವಸ್ಥಾನಗಳಲ್ಲಿ ಬರಬೇಕು ಎಂದು ವಿನಂತಿಸಿದರು.
ನಾವು ಸಂಘಟನಾತ್ಮಕವಾಗಿ ಮುಂದುವರೆದು, ತುಳುನಾಡಿನ ಎಲ್ಲಾ ದೈವಸ್ಥಾನಗಳಿಗೆ ಭೇಟಿ ನೀಡಿ ಫೋಟೋ ವಿಡಿಯೋಗಳನ್ನು ತೆಗೆದರೆ ಯಾವ ರೀತಿಯ ಅಪಾಯ, ಅವಮಾನ, ದೈವ ನಿಂದನೆ ಆಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕು ಎಂದು ಸಂಘಟನೆಗೆ ಸಲಹೆ ನೀಡಿದರು.
ಹಿರಿಯ ದೈವ ನರ್ತಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೋಕಯ್ಯ ಸೇರಾ ಅವರು ಮಾತನಾಡಿ ದೈವಾರಾಧನೆ ಈಗ ಹಿಂದಿನಂತಿಲ್ಲ. ಕಾಲ ಬದಲಾಗುತ್ತಿದ್ದಂತೆ ಈಗ ದೈವಾರಾಧನೆಯೂ ಬದಲಾಗುತ್ತಿದೆ. ಜನರಲ್ಲಿ ಈ ಹಿಂದೆ ಇದ್ದ ಭಯ ಭಕ್ತಿ ಈಗ ಮಾಯವಾಗಿದೆ. ಹಿರಿಯ ದೈವ ನರ್ತಕರಿಗೆ ಈ ಕಾಲದಲ್ಲಿ ಬೆಲೆಯಿಲ್ಲದಂತಾಗುತ್ತಿದೆ. ನೇಮ ನಡೆಸುವವರು ನಿಯಮ ಬದ್ಧವಾದ ನೇಮಕ್ಕಿಂತ ಅಬ್ಬರದ ನೇಮ ಅಪೇಕ್ಷಿಸುತ್ತಿದ್ದಾರೆ, ಇದರಿಂದಾಗಿ ಯುವ ದೈವ ನರ್ತಕರು ಅನಿವಾರ್ಯವಾಗಿ ಬಣ್ಣಗಾರಿಕೆ, ಕುಣಿತ, ವೇಷಭೂಷಣ ಇಲ್ಲೆಲ್ಲಾ ಬದಲಾವಣೆ ತರುವಂತಾಗಿದೆ. ನೇಮ ಒಪ್ಪಿಸುವ ಮನೆಯವರು, ಗುತ್ತಿನವರು ತಮ್ಮ ಮನೆಯ, ಊರಿನ ದೈವಗಳಿಗೆ ಹೀಗೆಯೇ ನೇಮ ನಡೆಯಬೇಕು ಎಂದು ಹೇಳಿದ್ದಲ್ಲಿ ದೈವ ಚಾಕಿರಿಯವರು ಅದೇ ರೀತಿ ಮಾಡುವ ಅನಿವಾರ್ಯತೆಗೆ ಸಿಲುಕುತ್ತಾರೆ, ಆಗ ಖಂಡಿತಾ ಬದಲಾವಣೆ ಸಾಧ್ಯವಿದೆ. ದೈವಗಳು ಕೊಡಿಯಡಿ ಬಿಟ್ಟು ಬೀದಿಬದಿ, ನಾಟಕ, ಸಿನೇಮಾದಲ್ಲಿ ಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ತಡೆಯಲು ದೈವ ನರ್ತಕ ಸಮುದಾಯ ನಿಮ್ಮ ಸಂಘಟನೆಗೆ ಪೂರ್ಣ ಸಹಕಾರ ನೀಡಲು ಬದ್ಧವಾಗಿದೆ ಎಂದರು.
ಮಧ್ಯಸ್ಥರಾದ ಮನ್ಮಥ ಶೆಟ್ಟಿ ಅವರು ಮಾತನಾಡಿ, ದೈವಾರಾಧನೆಯಲ್ಲಿ ಮಧ್ಯಸ್ಥನ ಪಾತ್ರ ಭಾರೀ ಪ್ರಮುಖವಾಗಿದೆ. ಇತ್ತೀಚೆಗೆ ಕೆಲವರು ದೈವಾರಾಧನೆಯಲ್ಲಿ ಮಧ್ಯಸ್ಥರು ಇತ್ತೀಚೆಗೆ ಸೇರ್ಪಡೆಗೊಂಡಿದ್ದಾರೆ ಎಂದು ವಾದಿಸುತ್ತಾರೆ. ಅದು ತಪ್ಪು ಮದಿಪು ಎನ್ನುವುದು ಆರಂಭದಿಂದಲೂ ಇತ್ತು. ಇಂದು ಮದಿಪುವವ ಎನ್ನುವ ಬದಲು ಮಧ್ಯಸ್ಥ ಎನ್ನುತ್ತಾರೆ. ದೈವ ಕಲದಲ್ಲಿ ಮದಿಪು ಎನ್ನುವ ಪದಕ್ಕೆ ಭಾರೀ ಶಕ್ತಿಯಿದೆ. ಆದರೆ ಇಂದಿನ ಯುವ ಪೀಳಿಗೆ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಯೂಟ್ಯೂಬ್ ನೋಡಿ ಬಾಯಿಪಾಠ ಮಾಡಿಯೋ, ಪುಸ್ತಕದಿಂದ ಕಂಠಪಾಠ ಮಾಡಿಕೊಂಡು ಬಂದು ದೈವ ಕಲದಲ್ಲಿ ಮ್ಯಾಚಿಂಗ್ ವಸ್ತ್ರ ಧರಿಸಿ ನಿರರ್ಗಳವಾಗಿ ಏಳೆಂಟು ನಿಮಿಷ ಕಥೆ ಹೇಳುತ್ತಾರೆ. ಇದು ತಪ್ಪು, ದೈವದ ಕಟ್ಟುಕಟ್ಟಳೆ, ಹಿನ್ನಲೆ, ವಿವಿಧ ಹಂತಗಳನ್ನು ತಿಳಿದುಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಲು ಪ್ರಯತ್ನಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂದು ಮಧ್ಯಸ್ಥರೊಂದಿಗೆ ರೀಲ್ಸ್ ವಿಡಿಯೋ ಮಾಡಲು, ಫೋಟೋ ತೆಗೆದು ವೈರಲ್ ಮಾಡಲೆಂದೇ ತಮ್ಮೊಂದಿಗೆ ಸಹಾಯಕರನ್ನು ಕರೆದುಕೊಂಡು ಬರುವ ಸ್ಥಿತಿಗೆ ನಾವು ತಲುಪಿರುವುದು ವಿಷಾದನೀಯ. ದೈವ ನಂಬಿಕೆ ಉಳಿಸುವತ್ತ ನಾವು ಚಿಂತಿಸಬೇಕಿದೆ ಎಂದರು.
ದೈವ ನಂಬಿಕೆಗಳ ವಿರುದ್ಧ ಆಗುತ್ತಿರುವ ಅವಮಾನ, ನಿಂದನೆಗಳನ್ನು ಕಾನೂನಾತ್ಮಕವಾಗಿ ಹೇಗೆ ಎದುರಿಸಬಹುದು ಎಂಬ ವಿಚಾರದಲ್ಲಿ ಮಾತನಾಡಿದ ಖ್ಯಾತ ವಾಗ್ಮಿ ಹಾಗೂ ವಕೀಲರಾದ ಸಹನಾ ಕುಂದರ್ ಸೂಡಾ ಅವರು, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ಕಾನೂನಿನಲ್ಲಿ ಶಿಕ್ಷಿಸುವ ಅವಕಾಶವಿದೆ. ಸಂಘರ್ಷ ಬಿಟ್ಟು ಕಾನೂನು ಮಾರ್ಗದಲ್ಲಿ ಹೋದರೆ ದೈವ ನಂಬಿಕೆಯ ಪರವಾಗಿ ಪರಿಣಾಮಕಾರಿಯಾದ ಬದಲಾವಣೆಗಳು ಸಾಧ್ಯ ಎಂದರು. ಈಗ ದೈವದ ಕಲಗಳಿಗೆ ಹೋಗುವ ತಾಯಂದಿರು, ಹೆಣ್ಣು ಮಕ್ಕಳು ಜಾಗೃತರಾಗಿರಬೇಕು. ದೈವದ ಕಾರಣಿಕದ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು, ನಾವೇ ಮುಂದೆ ನಿಂತು ಫೋಟೋ, ವಿಡಿಯೋ ತೆಗೆದರೆ ಯಾವ ಸಂದೇಶ ತಲುಪುತ್ತದೆ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದ ಕೊನೆಯ ಅವಧಿಯಲ್ಲಿ ತಮ್ಮಣ್ಣ ಶೆಟ್ಟಿ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸಂವಾದದಲ್ಲಿ ದೈವಾರಾಧನೆಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬದಲಾವಣೆ ಮತ್ತು ಅದಕ್ಕೆ ಪರಿಹಾರ, ದೈವರಾಧನೆಯ ಕಟ್ಟುಪಾಡು, ಸಿನೇಮಾ ನಾಟಕಗಳಲ್ಲಿ ದೈವಗಳನ್ನು ತೋರಿಸದಂತೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಇನ್ನಾದರೂ ಸಿನೇಮಾ, ಯಕ್ಷಗಾನ, ನಾಟಕಗಳಲ್ಲಿ ದೈವಗಳನ್ನು ಥೇಟ್ ಕೊಡಿಯಡಿಯ ವೇಷಭೂಷಣಗಳ ಬದಲು ಕೇವಲ ಸಿಂಬಾಲಿಕ್ ಆಗಿ ತೋರಿಸಲು ಪ್ರಯತ್ನಿಸಿ ಮತ್ತು ಟ್ಯಾಬ್ಲೋ, ಶಾಲಾ ಕಾರ್ಯಕ್ರಮಗಳಲ್ಲಿ ದೈವಗಳನ್ನು ಪ್ರದರ್ಶನದ ವಸ್ತು, ಸಾಂಸ್ಕೃತಿಕ ಕಾರ್ಯಕ್ರಮವಾಗಿ ತೋರಿಸುವುದನ್ನು ನಿಲ್ಲಿಸಿ ಎಂಬುದು ಕಾರ್ಯಕ್ರಮಕ್ಕೆ ಆಗಮಿಸಿದವರ ಒತ್ತಾಯವಾಗಿತ್ತು.
ಪೊಸತ್ ತೋಡಡೆ, ಪರತ್ ನಿಗಿಪಡೆ ಎಂಬ ದೈವ ನುಡಿಯಂತೆ ಕಾರ್ಯಕ್ರಮಕ್ಕೆ ಬಂದವರಿಂದ ಪೊಸತೆನ್ ತೋಡುಜಾ, ಪರತೆನ್ ನಿಗಿಪುಜಾ ಎಂಬ ವಾಗ್ದಾನದ ರೂಪದಲ್ಲಿ ಸಹಿ ಸಂಗ್ರಹ ಮಾಡಲಾಗಿದ್ದು, ಇದಕ್ಕೂ ಆಗಮಿಸಿದವರು ಮೆಚ್ಚುಗೆ ಸೂಚಿಸಿದರು.
ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ನಿರ್ಧಾರವನ್ನು ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ ಕೈಗೊಂಡಿದ್ದು, ಹಿಂದೂ ಸಂಘಟನೆಗಳ ಪ್ರಮುಖರಾದ ಶರಣ್ ಪಂಪ್ವೆಲ್, ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಸಂಘಟನೆಯ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಜೀವಿತಾ ಕುತ್ತಾರ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿಗಳು ಹಾಗೂ ಹಿಂದೂ ಸಂಘಟನೆಯ ಪ್ರಮುಖರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ, ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್ವೆಲ್, ಹಿರಿಯ ದೈವ ನರ್ತಕರಾದ ಲೋಕಯ್ಯ ಸೇರಾ, ಚಂದು ನಲಿಕೆ, ಎನ್‌ಕೆ ಸಾಲಿಯಾನ್, ಮಧ್ಯಸ್ಥರಾದ ಮನ್ಮಥ ಶೆಟ್ಟಿ ಪುತ್ತೂರು, ಶಾಸಕರಾದ ವೇದವ್ಯಾಸ್ ಕಾಮತ್, ಮುಂಬೈಯ ಚಂದ್ರಕಾಂತ್ ಶೆಟ್ಟಿ ಬೆರ್ಮೊಟ್ಟು, ಖ್ಯಾತ ವಕೀಲರಾದ ಸಹನಾ ಕುಂದರ್ ಸೂಡಾ, ತುಳು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ದಯಾನಂದ್ ಕತ್ತಲ್ಸಾರ್, ಸಾಂಸ್ಕೃತಿಕ ವಿಮರ್ಶಕರಾದ ತಮ್ಮಣ್ಣ ಶೆಟ್ಟಿ, ತುಳುನಾಡ ದೈವರಾಧನೆ ಸಂರಕ್ಷಣಾ ವೇದಿಕೆ ಇದರ ಗೌರವಾಧ್ಯಕ್ಷರಾದ ದಿಲ್‌ರಾಜ್ ಆಳ್ವ, ಅಧ್ಯಕ್ಷರಾದ ಭರತ್ ಬಳ್ಳಾಲ್‌ಭಾಗ್, ಕಾರ್ಯಕ್ರಮದ ಸಂಯೋಜಕರಾದ ಧನುಷ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.