November 28, 2025
WhatsApp Image 2024-09-14 at 9.40.21 AM

ಪೆರುವಾಯಿ : ಸ್ವಾತಂತ್ರ್ಯೋತ್ಸವಕ್ಕೆ ದೆಹಲಿಯಿಂದ ಆಹ್ವಾನ ಸ್ವೀಕರಿಸಿದ್ದ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಗುರುವಾರ ನಡೆದಿದ್ದ ಪೆರುವಾಯಿ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯಲ್ಲಿ ಇದೇ ವಿಚಾರವಾಗಿ ಕೋಲಾಹಲವೇ ನಡೆದಿದೆ. ದೆಹಲಿಗೆ ತೆರಳಲು ಪಂಚಾಯತ್ ಹಣ ಖರ್ಚು ಮಾಡಿದ್ದಾರೆ ಎಂದು ಕೆಲ ಗ್ರಾಮಸ್ಥರು ಆರೋಪ ಮಾಡಿದ್ದರು. ಆದ್ರೆ ಅದು ಸರ್ಕಾರ ಭರಿಸಲಿದ್ದು, ಜಿಲ್ಲಾ ಪಂಚಾಯತ್‌ನಿಂದ ಮರುಪಾವತಿಯಾಗಲಿದೆ ಎಂದು ಪಂಚಾಯತ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.

ಆದ್ರೆ ಇದೇ ವಿಚಾರ ಮುಂದಿಟ್ಟು ಗ್ರಾಮದ ಕೆಲವರು ಅಧ್ಯಕ್ಷರ ವಿರುದ್ಧ ಅವ್ಯವಹಾರದ ಆರೋಪ ಮಾಡಿದ್ದರು. ಸಭೆಯಲ್ಲಿ ಹಂಚಲಾಗಿದ್ದ ಪಂಚಾಯತ್ ಖರ್ಚು ವೆಚ್ಚದ ಪತ್ರದಲ್ಲಿ ಕೆಲವೊಂದು ಕ್ರಮ ಸಂಖ್ಯೆಗಳು ಮಾಯವಾಗಿದ್ದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ಇದೇ ವಿಚಾರವಾಗಿ ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಕಾರಣ ಸಭೆಯಲ್ಲಿ ಗೊಂದಲ ಆರಂಭವಾಗಿತ್ತು.
ಈ ವೇಳೆ ಯತೀಶ್ ಎಂಬವರು ಲೆಕ್ಕ ನೀಡುವ ವಿಚಾರದಲ್ಲಿ ಲೋಪವಾಗಿದ್ದು ಜನರಿಂದ ಕೆಲವು ವಿಚಾರವನ್ನು ಮುಚ್ಚಿಡುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು. ಈ ವೇಳೆ ಪಂಚಾಯತ್ ಅಧ್ಯಕ್ಷೆ ನಫೀಸಾ ಅವರ ಮೇಲೂ ಗುರುತರ ಆರೋಪಗಳನ್ನು ಮಾಡಿದ್ದರು. ಈ ವಿಚಾರವಾಗಿ ಕೆಂಡಾಮಂಡಲರಾದ ಅಧ್ಯಕ್ಷೆ ನಫೀಸಾ ಸಭೆಯಲ್ಲಿ ತನ್ನ ಉಗ್ರರೂಪ ತೋರಿಸಿದ್ದಾರೆ. ಒಬ್ಬ ಹೆಣ್ಣು ಅನ್ನೋ ಕಾರಣಕ್ಕೆ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಸಭೆಯ ಮುಂದೆ ಪ್ರಸ್ತಾಪಿಸಿದ್ದಾರೆ. ನಾನು ಪಂಚಾಯತ್‌ನಲ್ಲಿ ಒಂದು ರೂಪಾಯಿ ಅವ್ಯವಹಾರ ನಡೆಸಿದ್ರೂ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಅಧಿಕಾರಿಗಳು ನೀಡಿದ ವರದಿಯಲ್ಲಿ ಅವ್ಯವಹಾರ ನಡೆದಿರುವ ಕಾಮಗಾರಿಯ ವಿವರಗಳನ್ನು ಕಿತ್ತು ಹಾಕಲಾಗಿದೆ. ಈ ವಿಚಾರವಾಗಿ ತನಿಖೆ ಆಗ ಬೇಕು ಎಂದು ನಾವು ಒತ್ತಾಯಿಸಿದ್ದೇವೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಸುಮಾರು 4 ಲಕ್ಷ ರೂಪಾಯಿ ಮೊತ್ತದ ಕಾಮಗಾರಿಯ ಅವ್ಯವಾರ ನಡೆದಿದ್ದು, ಅದರ ಬಿಲ್‌ ಪಾಸ್ ಮಾಡಲು ಹಾಲಿ ಅಧ್ಯಕ್ಷೆ ನಫೀಸಾ ನಿರಾಕರಿಸಿದ್ದಾರೆ. ಹಿಂದಿನ ಗ್ರಾಮಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದರೂ ಅದರ ತನಿಖೆ ಆಗಿಲ್ಲ. ಈಗ ಬಂದಿರುವ ಅಧಿಕಾರಿಗಳು ಹೊಸಬರಾಗಿದ್ದು, ಅವರಿಗೂ ಈ ವಿಚಾರ ಗೊತ್ತಿಲ್ಲ.

ಪಂಚಾಯತ್ ಉಪಾಧ್ಯಕ್ಷೆಯಾಗಿ ಕಸ ವಿಲೆವಾರಿ ವಾಹನವನ್ನು ತಾನೇ ಚಲಾಯಿಸಿ ಹೆಸರು ಮಾಡಿದ್ದ ನಫೀಸಾ ಈಗ ಅಧ್ಯಕ್ಷೆಯಾಗಿದ್ದಾರೆ. ನಫೀಸಾ ಅವರ ಸೇವೆಯನ್ನು ಪ್ರಧಾನಿ ಕಾರ್ಯಾಲಯವೇ ಗುರುತಿಸಿ ಅವರಿಗೆ ಸ್ವಾತಂತ್ರ್ಯೋತ್ಸವದ ಗೌರವ ನೀಡಿದೆ. ಕೇಂದ್ರ ಹಣಕಾಸು ಆಯೋಗದ ಸಭೆಗೂ ವಿಶೇಷ ಆಹ್ವಾನ ಇವರಿಗೆ ಸಿಕ್ಕಿದೆ. ಆದರೆ ಇಷ್ಟೆಲ್ಲಾ ಆಗಿದ್ರೂ ಇದೀಗ ಗ್ರಾಮ ಸಭೆಯಲ್ಲಿ ಅಧ್ಯಕ್ಷೆ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಇದು ತೇಜೋವಧೆ ಮಾಡುವ ಉದ್ದೇಶದಿಂದ ನಡೆದಿದೆ ಎಂದಿರುವ ನಫೀಸಾ ರಾಜೀನಾಮೆಯ ಚಾಲೇಂಜ್ ಕೂಡಾ ಹಾಕಿದ್ದಾರೆ. ಅಂತೂ ಇಂತು ಆಯೋಜಿಸಿದ್ದ ಗ್ರಾಮಸಭೆ ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ಸೂಸೂತ್ರವಾಗಿ ಮುಗಿಸಲಾಗಿದೆ.

About The Author

Leave a Reply