October 22, 2025
WhatsApp Image 2024-09-15 at 11.02.17 AM

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನ ಬ್ಯಾಂಕ್ ಶಾಖೆಯೊಳಗಿಂದಲೇ ನಿವೃತ್ತ ಸೈನಿಕರೊಬ್ಬರ 1.30 ಲಕ್ಷ ರೂ. ನಗದು ಇದ್ದ ಬ್ಯಾಗ್‌ ಎಗರಿಸಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಡ್ಯಾರ್‌ ರೈಮಂಡ್‌ ಲೋಬೋ ನಗರ ನಿವಾಸಿ ಅಂಬ್ರೋಸ್‌ ಡಿಸೋಜ ಎಂಬ ನಿವೃತ್ತ ಸೈನಿಕ ನಗದು ಕಳೆದುಕೊಂಡವರು. ಸೆ.4ರಂದು ಬ್ಯಾಂಕ್‌ ಶಾಖೆಗೆ ಆಗಮಿಸಿದ್ದ ಅವರು ತಮ್ಮ ಖಾತೆಯಿಂದ ಪಿಂಚಣಿ ಹಣ 80 ಸಾವಿರ ರೂ. ಡ್ರಾ ಮಾಡಿದ್ದಾರೆ. ಬರುವಾಗಲೇ ಅವರು 50 ಸಾವಿರ ರೂ. ಹಣ ತನ್ನೊಂದಿಗೆ ತಂದಿದ್ದರು. ಒಟ್ಟು 1.30 ಲಕ್ಷ ರೂ. ಹಣವಿದ್ದ ಬ್ಯಾಗ್‌ ಅನ್ನು ಬ್ಯಾಂಕ್ ಟೇಬಲ್‌ ಮೇಲಿಟ್ಟು ಪಾಸ್‌ಬುಕ್‌ ಎಂಟ್ರಿ ಮಾಡಿಸಿ ಹಿಂದಿರುಗಿದಾಗ ಬ್ಯಾಗ್‌ ಅಲ್ಲಿರಲಿಲ್ಲ. ಶುಕ್ರವಾರ ಈ ಬಗ್ಗೆ ದೂರು ನೀಡಿದ್ದು, ತಾನು ಪೆನ್ಶನ್‌ ಹಣವನ್ನು ಮೂರ್‍ನಾಲ್ಕು ತಿಂಗಳಿಗೊಮ್ಮೆ ಖಾತೆಯಿಂದ ಡ್ರಾ ಮಾಡುತ್ತಿದ್ದೇನೆ. ಸೆ. 4ರಂದು ಸಮುದಾಯದ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಹಣ ಡ್ರಾ ಮಾಡಲು ಬ್ಯಾಂಕಿಗೆ ತೆರಳಿದ್ದೆ. ಈ ವೇಳೆ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಳಿಕ ಅವರ ಬ್ಯಾಗ್‌ ಹಾಗೂ ಪಾಸ್‌ಪುಸ್ತಕ ಬಿ.ಸಿ. ರೋಡ್‌ನ ಕೈಕುಂಜೆಯಲ್ಲಿ ಪತ್ತೆಯಾಗಿದ್ದು, ಆದರೆ ಅದರಲ್ಲಿ ಹಣವಿರಲಿಲ್ಲ. ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

About The Author

Leave a Reply